ದಾವಣಗೆರೆ: ಇಂಗ್ಲೆಂಡ್ನಿಂದ ಜಿಲ್ಲೆಗೆ ಬಂದಿದ್ದ ಏಳು ಜನರ ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ದೂರವಾಣಿ ಮೂಲಕ 'ಈಟಿವಿ ಭಾರತ'ಗೆ ಮಾಹಿತಿ ನೀಡಿದರು.
ಇಂಗ್ಲೆಂಡಿನಿಂದ ಬಂದಿದ್ದವರ ಸ್ಯಾಂಪಲ್ಗಳನ್ನು ತೆಗೆದುಕೊಂಡು ಕೊರೊನಾ ಪರೀಕ್ಷೆ ನಡೆಸಲು ಲ್ಯಾಬ್ಗೆ ಕಳುಹಿಸಿ ಕೊಡಲಾಗಿತ್ತು. ಅವರ ವರದಿ ಬಂದಿದ್ದು, ಆರು ಜನರ ಕೋವಿಡ್ ವರದಿಯಲ್ಲಿ ನೆಗೆಟಿವ್ ಬಂದಿದೆ. ಈಗಾಗಲೇ ಈ ಹಿಂದೆಯೇ ಓರ್ವ ವ್ಯಕ್ತಿಯ ವರದಿ ನೆಗೆಟಿವ್ ಬಂದಿತ್ತು ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.
ಓದಿ: ಲಂಡನ್ನಿಂದ ಬಂದವರ ಮೇಲೆ ತೀವ್ರ ನಿಗಾ ವಹಿಸಲಾಗಿದೆ : ಡಿಸಿ ಮಹಾಂತೇಶ್ ಬೀಳಗಿ
ಒಂದು ಕುಟುಂಬದಲ್ಲಿ ನಾಲ್ವರು ಹಾಗೂ ಮೂರು ಜನ ಬೇರೆ ಬೇರೆ ಕಡೆ ಇದ್ದು, ಇವರನ್ನು ಹೋಂ ಕ್ವಾರಂಟೈನ್ನಲ್ಲಿ ಇಡಲಾಗಿದೆ. ವೈದ್ಯರ ತಂಡ ನಿರಂತರ ಇವರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದು, ಸದ್ಯ ಆತಂಕ ಪಡುವ ಅಗತ್ಯವಿಲ್ಲ. ಮೇಲಾಗಿ ನಿತ್ಯ ವಿದೇಶದಿಂದ ರಾಜ್ಯಕ್ಕೆ ಬರುವ ಪಟ್ಟಿ ಲಭ್ಯವಾಗುತ್ತದೆ. ದಾವಣಗೆರೆಗೆ ಬರುವ ವಿದೇಶಿಯರ ಬಗ್ಗೆ ನಿಗಾ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.