ದಾವಣಗೆರೆ: ತುಂಗಭದ್ರಾ ನದಿಯಲ್ಲಿ ಕೊಚ್ಚಿಹೋದ ವ್ಯಕ್ತಿಯ ಮೃತದೇಹದ ಶೋಧ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಈಜು ತಜ್ಞರು, ಅಗ್ನಿ ಶಾಮಕ ಸಿಬ್ಬಂದಿ ಸತತ ನಾಲ್ಕು ದಿನಗಳಿಂದ ಹುಡುಕಾಟ ನಡೆಸಿದರೂ ಕೂಡ ಮೃತ ದೇಹ ಮಾತ್ರ ಸಿಕ್ಕಿರಲಿಲ್ಲ. ಇದರಿಂದ ಶೋಧ ಕಾರ್ಯ ಸ್ಥಗಿತಗೊಳಿಸಲಾಯಿತು.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಶ್ರೀ ಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಕಳೆದ ನಾಲ್ಕೈದು ದಿನಗಳ ಹಿಂದೆ ಈ ಘಟನೆ ನಡೆದಿತ್ತು. ತುಂಬಿ ಹರಿಯುತ್ತಿದ್ದ ನದಿಯಲ್ಲಿ ಸ್ನಾನ ಮಾಡಲು ತೆರಳಿ ಪರಮೇಶ್ ನಾಯ್ಕ್ (35) ನೀರಿನಲ್ಲಿ ಕೊಚ್ಚಿ ಹೋಗಿದ್ದನು. ಪತ್ತೆಯಾಗದ ಪರಮೇಶ್ ನಾಯ್ಕ್ ಚನ್ನಗಿರಿ ತಾಲೂಕಿನ ರಾಜಗೊಂಡನಹಳ್ಳಿ ತಾಂಡಾದ ನಿವಾಸಿ.
ಉಕ್ಕಡಗಾತ್ರಿ ಕರಿಬಸವೇಶ್ವರ ಸ್ವಾಮಿಯ ದೇವಸ್ಥಾನಕ್ಕೆ ಕುಟುಂಬದ ಜೊತೆ ಬಂದಾಗ ಈ ಅವಘಡ ನಡೆದಿತ್ತು. ನದಿ ನೀರಿನ ಮಟ್ಟ ಹೆಚ್ಚಾದ ಹಿನ್ನೆಲೆ ಕೊಚ್ಚಿ ಹೋಗಿರಬಹುದು ಇಲ್ಲವೇ ಜಲಚರ ಪ್ರಾಣಿಗಳಿಗೆ ಆಹಾರವಾಗಿರಬಹುದು ಎಂದು ಅಗ್ನಿಶಾಮಕ ಸಿಬ್ಬಂದಿ ಶಂಕೆ ವ್ಯಕ್ತಪಡಿಸಿದ್ದಾರೆ.
ಇದರ ಸಂಬಂಧ ಮಲೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅಗ್ನಿಶಾಮಕ ಸಿಬ್ಬಂದಿ, ಪೊಲೀಸರು ನಾಲ್ಕೈದು ದಿನಗಳಿಂದ ಉಕ್ಕಡಗಾತ್ರಿಯಲ್ಲೇ ಬೀಡುಬಿಟ್ಟು ಶೋಧ ನಡೆಸುತ್ತಿದ್ದರು. ಆದರೆ, ಈವರೆಗೆ ಮೃತ ದೇಹ ಮಾತ್ರ ಪತ್ತೆಯಾಗಿಲ್ಲ.
ಇದನ್ನೂ ಓದಿ: ಉಕ್ಕಡಗಾತ್ರಿ ದೇವಾಲಯಕ್ಕೆ ತೆರಳಿದ್ದ ಭಕ್ತ: ಸ್ನಾನ ಮಾಡಲು ನದಿಗಿಳಿದು ಕೊಚ್ಚಿ ಹೋದ ಯುವಕ