ದಾವಣಗೆರೆ: ಕೊರೊನಾಕ್ಕೆ ವಿಶ್ವೇಶ್ವರ ಶಿವಾಚಾರ್ಯ ಹಾಲ ಸ್ವಾಮೀಜಿ ದೈವಾಧೀನರಾದ ಹಿನ್ನೆಲೆಯಲ್ಲಿ ಹೊನ್ನಾಳಿ ತಾಲೂಕಿನ ರಾಂಪುರದ ಗವಿಸಿದ್ದೇಶ್ವರ ಮಠದ ಸುತ್ತ ಸ್ಯಾನಿಟೈಸ್ ಮಾಡಿಸಲಾಯಿತು.
ಮುಳ್ಳುಗದ್ದುಗೆ ಮೂಲಕ ಪವಾಡ ಪುರುಷ ಎನಿಸಿಕೊಂಡಿದ್ದ ಸ್ವಾಮೀಜಿ ನಿನ್ನೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ರಾತ್ರಿ ಮಠದ ಆವರಣದಲ್ಲಿ ಶ್ರೀಗಳ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಇಂದು ಮಠಕ್ಕೆ ಭೇಟಿ ನೀಡಿದ ಎಂ. ಪಿ. ರೇಣುಕಾಚಾರ್ಯ ಸ್ವತಃ ಸ್ಯಾನಿಟೈಸ್ ಮಾಡಿದರು. ಹದಿನಾಲ್ಕು ದಿನ ಮಠವನ್ನು ಸೀಲ್ಡೌನ್ ಮಾಡುತ್ತಿದ್ದು ಭಕ್ತರು ಮಠಕ್ಕೆ ಬಾರದಂತೆ ಮನವಿ ಮಾಡಿದರು.
ಮಠದಲ್ಲಿ ಓಡಾಡಿ ಗುರುಗಳೊಂದಿಗಿನ ತಮ್ಮ ಒಡನಾಟ ನೆನೆದು ಭಾವುಕರಾದ ರೇಣುಕಾಚಾರ್ಯ, ಸಮಾಜದಲ್ಲಿ ಎಲ್ಲಾ ವರ್ಗದವರಿಗೂ ಶ್ರೀಗಳ ನಿಧನದಿಂದ ಅತೀವ ದು:ಖವಾಗಿದೆ. ಕೊರೊನಾ ವೈರಸ್ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಸಾರ್ವಜನಿಕರು, ಮಠದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬಾರದು. ಶ್ರೀಗಳ ಜೊತೆಗಿದ್ದವರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿಕೊಡಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಜನರು ಸಹಕರಿಸಬೇಕು ಎಂದು ಮನವಿ ಮಾಡಿದರು.