ದಾವಣಗೆರೆ: ರೈಸ್‍ಮಿಲ್ ಮಾಲೀಕರು ರೈತರ ಸಂಕಷ್ಟಕ್ಕೆ ಸ್ಪಂದಿಸಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಭತ್ತ ಖರೀದಿಸುವಂತೆ ಡಿಸಿ ಮಹಾಂತೇಶ್ ಬೀಳಗಿ ಸೂಚನೆ ನೀಡಿದ್ದಾರೆ.
ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ರೈಸ್‍ಮಿಲ್ ಮಾಲೀಕರಿಗಾಗಿ ಹಮ್ಮಿಕೊಳ್ಳಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ರೈಸ್‍ಮಿಲ್ ಮಾಲೀಕರೊಂದಿಗೆ ಜಿಲ್ಲಾಡಳಿತವಿದೆ. ನಿಮಗೆ ಯಾವುದೇ ರೀತಿಯ ನಷ್ಟ ಆಗದಂತೆ ನಾವು ನೋಡಿಕೊಳ್ಳುತ್ತೇವೆ. ನಿಮ್ಮ ಬಗ್ಗೆ ಮುತುವರ್ಜಿ ವಹಿಸುತ್ತೇವೆ. ಈ ಹಿನ್ನೆಲೆ ರೈತರಿಗೆ ನೆರವಾಗಲು ಮುಂದೆ ಬರಬೇಕು ಎಂದರು.
ಜಿಲ್ಲೆಯಲ್ಲಿ ರೈತರು ಸಾಕಷ್ಟು ಭತ್ತ ಬೆಳೆದಿದ್ದಾರೆ. ಜಿಲ್ಲೆಯ ನಾಲ್ಕೈದು ಜನ ರೈಸ್ ಮಿಲ್ಲರ್ಸ್ ರೈತರಿಂದ ಭತ್ತ ಖರೀದಿಗೆ ಮುಂದಾಗಬೇಕು. ಉತ್ತಮವಾದ ನಂಬರ್ ಒನ್ ಭತ್ತವನ್ನೇ ರೈತರಿಂದ ಖರೀದಿ ಮಾಡಿಕೊಳ್ಳಿ. ಕನಿಷ್ಠ ಬೆಂಬಲ ಬೆಲೆ ಯೋಜನೆಯು ರೈತರ ಪರವಾಗಿ ಇರುವ ಯೋಜನೆಯಾಗಿದ್ದು, ನೀವು ಇದರಡಿ ಯಾವುದೇ ರೀತಿಯಲ್ಲಿ ನಷ್ಟ ಮಾಡಿಕೊಂಡು ಭತ್ತ ಖರೀದಿಸುವ ಅವಶ್ಯಕತೆಯಿಲ್ಲ. ಬದಲಾಗಿ ರೈತರು ಬೆಳೆದಿರುವ ಉತ್ತಮ ಗುಣಮಟ್ಟದ ಭತ್ತವನ್ನೇ ಖರೀದಿಸಿ ಎಂದರು.
ನಂತರ ಮಾತು ಮುಂದುವರೆಸಿ, ಈ ರೀತಿಯ ಸಂಕಷ್ಟದ ಸಂದರ್ಭದಲ್ಲಿ ರೈಸ್ ಮಿಲ್ಲರ್ಸ್‍ಗಳಲ್ಲೇ ಯಾರಾದರೂ ಭತ್ತ ಖರೀದಿಗೆ ಮುಂದಾದರೆ ಎಲ್ಲ ರೀತಿಯ ಸಹಕಾರ ನಾವು ನೀಡುತ್ತೇವೆ ಎಂದು ಭರವಸೆ ನೀಡಿದರು.
ಅತ್ಯಂತ ಕಷ್ಟದ ಕಾಲವಾದ ಕೊರೊನಾ ಲಾಕ್‍ಡೌನ್ ವೇಳೆಯಲ್ಲಿ ರೈಸ್ ಮಿಲ್ಲರ್ಸ್ ಅನೇಕ ರೀತಿಯ ಪ್ರೋತ್ಸಾಹ, ಸಹಕಾರ ನೀಡಿರುವುದು ಹೆಮ್ಮೆಯ ಸಂಗತಿ. ಅದಕ್ಕಾಗಿ ನಿಮ್ಮೆಲ್ಲರಿಗೂ ಜಿಲ್ಲಾಡಳಿತದ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲರೂ ಸೇರಿ ಜಿಲ್ಲೆ ನಡೆಸಬೇಕು. ಒಬ್ಬೊಬ್ಬರು ಒಂದೊಂದು ಕೆಲಸ ಮಾಡಿದಾಗಲೇ ಜಿಲ್ಲೆ ಅಭಿವೃದ್ಧಿಯತ್ತ ಮುನ್ನಡೆಯಲು ಸಾಧ್ಯ ಎಂದರು.
ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಂಟೆಸ್ವಾಮಿ ಮಾತನಾಡಿ, ಜಿಲ್ಲೆಯಲ್ಲಿ ರೈತರ ಭತ್ತ ಖರೀದಿ ಮಾಡಲಾಗುತ್ತಿದೆ. ವಿವಿಧ ತಾಲೂಕುಗಳಲ್ಲಿ ಭತ್ತ ಮಾರಾಟ ಮಾಡಲು 17 ಜನ ರೈತರು ನೋಂದಾಯಿಸಿಕೊಂಡಿದ್ದರು. ಈ ವೇಳೆ ಕೊರೊನಾ ಸೋಂಕು ಇದ್ದ ಕಾರಣ ಒಂದು ತಿಂಗಳು ಭತ್ತ ಖರೀದಿ ಮಾಡಲಾಗಿರಲಿಲ್ಲ. ಆದರೆ, ಇದೀಗ ಸರ್ಕಾರ ಭತ್ತ ಖರೀದಿಗೆ ಅನುಮತಿ ನೀಡಿದ್ದು, ರೈತರ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ರೈಸ್ ಮಿಲ್ ಮಾಲೀಕರ ಸಂಘದ ಅಧ್ಯಕ್ಷ ಹೂಗುಂಟೆ ಬಕ್ಕೇಶ್ ಮಾತನಾಡಿ, ಸೋನಾ ಮಸೂರಿ, ಆರ್ಎನ್ಆರ್ ಭತ್ತದ ತಳಿಗಳ ಬೆಲೆ ಜಾಸ್ತಿ ಇರುತ್ತದೆ. ಮಳೆ ಇರುವುದರಿಂದ ಭತ್ತ ಹಸಿ ಇರುತ್ತವೆ. ಈ ರೀತಿಯ ಸಂದರ್ಭ ನಮಗೆ ಹೊಸದಾಗಿದೆ. ನಾವೆಲ್ಲರೂ ಮಾತನಾಡಿಕೊಂಡು ನಿಮಗೆ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು.