ದಾವಣಗೆರೆ: ತುಂಗಭದ್ರಾ ನದಿ ತುಂಬಿ ಹರಿದರೆ ಹೊನ್ನಾಳಿ ಹಾಗೂ ಹರಿಹರದ ನದಿ ತೀರದ ಜನರು ಇನ್ನಿಲ್ಲದ ಸಂಕಷ್ಟ ಅನುಭವಿಸಬೇಕಾಗಿತ್ತು. ಪ್ರತಿವರ್ಷ ನದಿ ಈ ತುಂಬಿದರೆ ಈ ಭಾಗಕ್ಕೆ ಸಂಕಷ್ಟ ತಪ್ಪಿದ್ದಲ್ಲ. ಆದರೆ, ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಸಮಸ್ಯೆ ಹೋಗಲಾಡಿಸಲು ವೇದಿಕೆ ಸಿದ್ಧಪಡಿಸಿದ್ದಾರೆ.
ಮನೆ ನೀಡಿ ನದಿತೀರದ ಜನರನ್ನು ಸ್ಥಳಾಂತರ ಮಾಡಲು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಹೊನ್ನಾಳಿಯ ಬಾಲರಾಜ್ ಘಾಟ್ ಹಾಗೂ ಹರಿಹರದ ಗಂಗಾ ನಗರದ ನಿವಾಸಿಗಳು ಈ ಸಂಕಷ್ಟಕ್ಕೆ ಹೆಚ್ಚು ಸಿಲುಕೊಳ್ಳುತ್ತಿದ್ದು, ಹಲವು ವರ್ಷಗಳಿಂದ ಈ ನೋವಿನ ಜೊತೆ ಜೀವನ ಸಾಗಿಸುತ್ತಾ ಬರುತ್ತಿದ್ದಾರೆ. ಮಲೆನಾಡಿನಲ್ಲಿ ಮಳೆಯಾದರೆ ಬಾಲ್ರಾಜ್ ಘಾಟ್ ಹಾಗೂ ಗಂಗಾನಗರದ ನಿವಾಸಿಗಳಿಗೆ ಸಂಕಷ್ಟ ತಪ್ಪಿದ್ದಲ್ಲ.
ಅಲ್ಲಿ ಮಳೆ ಆಗುವುದರಿಂದ ಕಿನಾರೆಯಲ್ಲೇ ನದಿ ನೀರು ಹರಿಯುವ ಮೂಲಕ ಇಲ್ಲಿಯ ಇಡೀ ಮನೆಗಳು ನೀರಿನಿಂದ ಜಲಾವೃತವಾಗುತ್ತಿದ್ದವು. ನದಿ ನೀರಿನಿಂದ ಕಂಗ್ಗೆಟ್ಟಿರುವ ಬಾಲ್ರಾಜ್ ಘಾಟ್ ಹಾಗೂ ಗಂಗ ನಗರದ ನಿವಾಸಿಗಳು ಸಾಕಷ್ಟು ಬಾರಿ ನಮಗೆ ಮನೆ ಕೊಟ್ಟು ಸ್ಥಳಾಂತರ ಮಾಡಿ ಸ್ವಾಮಿ ಎಂದು ಪರಿಪರಿಯಾಗಿ ಸಂಬಂಧಪಟ್ಟ ಶಾಸಕರಿಗೆ ಹೇಳಿಕೊಂಡಿದ್ದರು. ಆದರೆ, ಯಾವುದೇ ಪ್ರಯೋಜನ ಆಗಿರಲಿಲ್ಲ. ಇದೀಗ ಸಚಿವ ಭೈರತಿ ಬಸವರಾಜ್ ಈ ಬಾಲ್ರಾಜ್ ಘಾಟ್ ಹಾಗೂ ಗಂಗಾ ನಗರದ ನಿವಾಸಿಗಳನ್ನು ಸ್ಥಳಾಂತರ ಮಾಡಿ ಅವರಿಗೆ ಮನೆ ಕೊಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಇನ್ನೂ ಪ್ರತಿವರ್ಷ ನದಿ ನೀರಿನ ಮಟ್ಟ 10 ಮೀಟರ್ಗಿಂತ ಹೆಚ್ಚು ಅಪಾಯದ ಮಟ್ಟ ಮೀರಿ ಹರಿಯುತ್ತದೆ. ಇದರಿಂದ ಸಾಕಷ್ಟು ಬಾರೀ ಇಲ್ಲಿನ ನಿವಾಸಿಗಳು ಸಂಕಷ್ಟ ಎದುರಿಸುತ್ತಾ ಬಂದಿದ್ದಾರೆ. ಇದರಿಂದ ಹೊನ್ನಾಳಿ ಶಾಸಕ ಎಂಪಿ ರೇಣುಕಾಚಾರ್ಯ ಹಾಗೂ ಹರಿಹರದ ಶಾಸಕ ರಾಮಪ್ಪ ಮಾತ್ರ ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ. ನದಿ ತೀರದಲ್ಲೇ ಜೀವನ ಸಾಗಿಸುತ್ತಿರುವ ಅತ್ತಾವುಲ್ಲಾ ಅವರು ಮನೆಗಾಗಿ ಸಾಕಷ್ಟು ಬಾರಿ ಶಾಸಕರಿಗೆ ಮನವಿ ಮಾಡಿದ್ದಾರೆ.
ಆದ್ರೇ ಮನೆ ಮಾತ್ರ ಮರೀಚಿಕೆಯಾಗಿತ್ತು. ಪ್ರತಿ ವರ್ಷ ಕೂಡ ಇದೇ ಸಮಸ್ಯೆಯಾಗುತ್ತದೆ. ನದಿ ತುಂಬಿದರೆ ನಮ್ಮ ಮನೆಗಳೆಲ್ಲ ಜಲಾವೃತವಾಗುತ್ತವೆ. ಆದಷ್ಟು ಬೇಗ ನಮಗೆ ಮನೆ ನೀಡಿ ಎಂದು ಬಾಲ್ರಾಜ್ ಘಾಟ್ ನಿವಾಸಿ ಅತ್ತಾವುಲ್ಲಾ ಸರ್ಕಾರಕ್ಕೆ ಪರಿಪರಿಯಾಗಿ ಬೇಡಿಕೊಂಡಿದ್ದಾರೆ.
ಒಟ್ಟಾರೆ ಉಕ್ಕಿ ಹರಿಯುವ ತುಂಗಭದ್ರಾ ನದಿಯ ತೀರದಲ್ಲೇ ಭಯದಿಂದ ಜೀವನ ನಡೆಸುತ್ತಿರುವ ಬಡಕುಟುಂಬಗಳಿಗೆ ಸಿಹಿ ಸುದ್ದಿ ಬಂದೊದಗಿದೆ. ಇದೇ ತಿಂಗಳು 24 ರೊಳಗೆ ಬಾಲ್ರಾಜ್ ಘಾಟ್ ಹಾಗೂ ಗಂಗ ನಗರದ ನಿವಾಸಿಗಳಿಗೆ ಮನೆಗಳನ್ನು ನೀಡಿ ಸ್ಥಳಾಂತರ ಮಾಡುವಂತೆ ಸಚಿವ ಭೈರತಿ ಬಸವರಾಜ್ ಸಿಇಒ ಹಾಗೂ ಜಿಲ್ಲಾಧಿಕಾರಿಗೆ ಗಡುವು ನೀಡಿದ್ದಾರೆ. ಆದಷ್ಟು ಬೇಗ ಈ ಸಂಕಷ್ಟದಿಂದ ಪಾರು ಮಾಡಬೇಕು ಅನ್ನೋದು ಇವರ ಕಳಕಳಿ. ಆದರೆ, ಹಲವು ವರ್ಷಗಳ ಸಮಸ್ಯೆ ಬಗೆಹರಿಸುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ದಾವಣಗೆರೆಯಲ್ಲಿ ನಿರಂತರ ಮಳೆಗೆ ಮನೆ ಕುಸಿತ.. ಆಸ್ಪತ್ರೆ ಸೇರಿದ ದಂಪತಿ, ಶಿವಮೊಗ್ಗದಲ್ಲಿ ವೃದ್ಧೆ ಸಾವು