ದಾವಣಗೆರೆ: ಪಂಚಮಸಾಲಿಗಳಿಗೆ ಮೀಸಲಾತಿ ಶಾಶ್ವತವಾಗಿ ಸಿಗಬೇಕು, ಅನ್ಯಾಯ ಆಗದ ರೀತಿಯಲ್ಲಿ ನಾವು ನೋಡಿಕೊಳ್ಳುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಇಡೀ ಪಂಚಮಸಾಲಿ ಸಮಾಜಕ್ಕೆ ಆಶ್ವಾಸನೆ ನೀಡಿದರು. ದಾವಣಗೆರೆ ಜಿಲ್ಲೆಯ ಹರಿಹರದ ಹನಗವಾಡಿ ಗ್ರಾಮದ ಬಳಿ ಇರುವ ಪಂಚಮಸಾಲಿ ಮಠದಲ್ಲಿ ಜರುಗಿದ ಹರ ಜಾತ್ರೆಯಲ್ಲಿ ಅವರು ಈ ಆಶ್ವಾಸನೆ ನೀಡಿದ್ದಾರೆ.
ಯಾರಿಗೆ ನ್ಯಾಯ ಸಿಕ್ಕಿಲ್ಲ ಅವರಿಗೆ ನ್ಯಾಯ ಕೊಡಬೇಕಾಗಿದ್ದು ನಮ್ಮ ಜವಾಬ್ದಾರಿ, ರೈತಾಪಿ ಜನಾಂಗದ ಬದುಕು ಗಟ್ಟಿಯಾಗಬೇಕಾಗಿದೆ. ಮಾತನಾಡುವುದು ಸುಲಭ ಆದರೆ, ಜವಾಬ್ದಾರಿ ಸ್ಥಾನದಲ್ಲಿ ನಿಂತುಕೊಂಡು ನ್ಯಾಯವನ್ನು ಕೋಡುವಂತಹದ್ದು ಬಹಳ ಮುಖ್ಯವಾಗಿರುತ್ತದೆ. ಆ ಕೆಲಸ ನಮ್ಮ ಸರ್ಕಾರ ಖಂಡಿವಾಗಿಯೂ ಮಾಡೇ ಮಾಡುತ್ತದೆ ಎಂದು ಪರೋಕ್ಷವಾಗಿ ಪಂಚಮಸಾಲಿ ಮೀಸಲಾತಿ ನೀಡುತ್ತೇವೆ ಎಂದು ಸಿಎಂ ಸುಳಿವು ನೀಡಿದರು.
ಮೀಸಲಾತಿ ಬಗ್ಗೆ ಮೊದಲ ಹೆಜ್ಜೆ ಇಡಲಾಗಿದೆ: ಈಗಾಗಲೇ ಮೀಸಲಾತಿ ಬಗ್ಗೆ ಮೊದಲ ಹೆಜ್ಜೆ ಇಡಲಾಗಿದೆ. ಈ ವಿಚಾರವಾಗಿ ಮುಂದಿನ ಹೆಜ್ಜೆಯನ್ನ ವಿಚಾರ ಮಾಡಿ ಇಡಬೇಕಾಗಿದೆ.
ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಬಂದು ಹತ್ತು ವರ್ಷವಾಗಿದೆ. ಯಾರು ಕೂಡಾ ನೋಡಿಲ್ಲ. ಆದರೆ ಪಂಚಮಸಾಲಿ ಬಗ್ಗೆ ಕೆಲ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು. ಹಿಂದುಳಿದ ವರ್ಗಗಳ ಆಯೋಗದ ಅಂತಿಮ ವರದಿ ಬಂದ ತಕ್ಷಣ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಲಾಗುವುದು. ಈ ಬಗ್ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಈ ವಿಚಾರವಾಗಿ ನ್ಯಾಯಾಲಯದಲ್ಲಿ ಸೂಕ್ತವಾಗಿ ವಾದ ಮಂಡಿಸಲಾಗುವುದು. ಪಂಚಮ ಸಾಲಿ ಸಮಾಜಕ್ಕೆ ನ್ಯಾಯ ಒದಗಿಸುವೆ ಎಂದು ಇದೇ ವೇಳೆ ಸಿಎಂ ಭರವಸೆ ನೀಡಿದರು.
ಸಿಎಂ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ಕೊಡುವ ವಿಶ್ವಾಸ ಇದೆ: ಹರಜಾತ್ರೆಯ ವೇದಿಕೆಯಲ್ಲಿ ಮಾತನಾಡಿದ ಪಂಚಮಸಾಲಿ ಹರಿಹರ ಗುರುಪೀಠದ ವಚನಾನಂದ ಸ್ವಾಮೀಜಿ, ನಮ್ಮ ಪಂಚಮಸಾಲಿ ಸಮಾಜಕ್ಕೆ ಬೇಕಾಗಿದ್ದು ಮೀಸಲಾತಿ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೀಸಲಾತಿ ಕೊಟ್ಟೇ ಕೊಡುತ್ತಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು. ನಾವು ಪಂಚಮಸಾಲಿ ಸಮಾಜದವರು, ಸಂಸ್ಕಾರವಂತರು. ಬೇರೆಯವರ ಬಗ್ಗೆ ಕೆಟ್ಟದಾಗಿ ಮಾತಾಡುವುದು ನಮ್ಮ ಕೆಲಸವಲ್ಲ. ಯಾರನ್ನೇ ಗುರಿಯಾಗಿ ಇಟ್ಟುಕೊಂಡು ಮಾತಾಡುವುದು ನಮ್ಮ ಕೆಲಸವಲ್ಲ ಎಂದು ಪರೋಕ್ಷವಾಗಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ವಾಗ್ದಾಳಿ ನಡೆಸಿದರು.
ಮತ್ತೆ ಶಾಸಕ ಯತ್ನಾಳ್ಗೆ ಟಾಂಗ್ ಕೊಟ್ಟ ಸಚಿವ ಮುರುಗೇಶ್ ನಿರಾಣಿ: ನಮ್ಮ ಸಮಾಜದಲ್ಲಿ ಕೆಟ್ಟ ಹುಳುಗಳು ಇವೆ, ಅವುಗಳದ್ದು ವಿಜಯಪುರದಲ್ಲಿ ನಾಟಕ ಕಂಪನಿ ಇದೆ ಎಂದು ಮತ್ತೆ ಶಾಸಕ ಯತ್ನಾಳ್ಗೆ ಸಚಿವ ಮುರುಗೇಶ್ ನಿರಾಣಿ ಟಾಂಗ್ ನೀಡಿದರು. ದಾವಣಗೆರೆ ಜಿಲ್ಲೆಯ ಹರಿಹರದ ಹನಗವಾಡಿ ಗ್ರಾಮದ ಬಳಿ ಇರುವ ಪಂಚಮಸಾಲಿ ಮಠದಲ್ಲಿ ಜರುಗುತ್ತಿರುವ ಹರ ಜಾತ್ರೆ ಮೀಸಲಾತಿಗಾಗಿ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಬಾಯಿ ಮುಚ್ಚಿಕೊಂಡು ಸುಮ್ಮನೇ ಇದ್ದೇನೆ ಅಂದ್ರೇ ಅದು ನಮ್ಮ ವೀಕ್ನೇಸ್ ಅಲ್ಲ, ನಾವು ಕೂಡ ಘಟಪ್ರಭಾ ಮಲಪ್ರಭಾ ನೀರನ್ನು ಕುಡಿದವರು. ಹಾಗಾಗಿ ನಾನು ಎಂದೂ ಬಳಸದ ಪದವನ್ನು ಇವತ್ತು ಬಳಸುತ್ತಿದ್ದೇನೆ.
ಬೇರೆ ಬೇರೆ ಸಮಾಜದವರು ಶಾಂತಿಯುತವಾಗಿ ಹೋರಾಟ ಮಾಡಿ ಮೀಸಲಾತಿ ಪಡೆದುಕೊಂಡರು, ಇವತ್ತು ವಚನಾನಂದ ಸ್ವಾಮೀಜಿಗಳು ಕೂಡ ಶಾಂತಿಯುತವಾಗಿ ತಮ್ಮದೇ ಹಾದಿಯಲ್ಲಿ ಹೋರಾಟ ಮಾಡುತ್ತಿದ್ದಾರೆ ಎಂದು ಸಚಿವ ಮುರುಗೇಶ್ ನಿರಾಣಿ ಹೇಳಿದರು.
ಯಡಿಯೂರಪ್ಪ ಸಿಎಂ ಆಗಿದ್ದಾಗ ಮಠಕ್ಕೆ ಹತ್ತು ಕೋಟಿ ಅನುದಾನ ನೀಡಿದ್ರು: ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಮಠಕ್ಕೆ ಹತ್ತು ಕೋಟಿ ಅನುದಾನ ನೀಡಿದರು. ಆಗ ಸ್ವಾಮೀಜಿಗಳು ಅನುದಾನ ಬೇಡಾ 2A ಮೀಸಲಾತಿ ಬೇಕು ಎಂದು ಕೇಳಿದ್ದರು. ಪಂಚಮಸಾಲಿ ಸಮಾಜವನ್ನು 2010 ರಲ್ಲಿ 3B ಸೇರಿಸಿದ್ದು ಯಡಿಯೂರಪ್ಪನವರು. 2A ಮೀಸಲಾತಿ ನೀಡುವ ಸಮಯದಲ್ಲಿ ಕೋರ್ಟ್ನಿಂದ ಸ್ಟೇ ತಂದಿದ್ದರು. ಆ ಬಳಿಕ ನಮ್ಮ ಸರ್ಕಾರ 2013ರಲ್ಲಿ ಅಧಿಕಾರ ಕಳೆದುಕೊಂಡಿತು. ಆ ಸಮಯದಲ್ಲಿ ಕಾಂಗ್ರೆಸ್ ಸರ್ಕಾರ ಇತ್ತು. ಆಗ ಬಾರ್ಕೋಲು ಪ್ರತಿಭಟನೆ, ಸಿಎಂ ಮನೆಗೆ ಮುತ್ತಿಗೆ ಹಾಕಬೇಕಿತ್ತು ಎಂದು ವಾಗ್ದಾಳಿ ನಡೆಸಿದರು.
ವಿಜಯಪುರ ನಾಟಕ ಕಂಪನಿ ಇದೆ, ಯತ್ನಾಳ್ಗೆ ಟಾಂಗ್: ವಿಜಯಪುರದಲ್ಲಿ ನಾಟಕ ಕಂಪನಿ ಇದೆ. ಅ ನಾಟಕ ಕಂಪನಿಯಲ್ಲಿ ಕೆಟ್ಟ ಹುಳುಗಳು ಸೇರಿಕೊಂಡಿವೆ. ಯಾವಾಗ ಯಾರನ್ನು ಬೈತಾರೋ ಗೊತ್ತೇ ಆಗೋಲ್ಲ, ವಿಜಯಪುರ ಹಾಗೂ ಹುನುಗಂದ ನಾಯಕರು ಕೆಟ್ಟ ಹುಳುಗಳು ಎಂದು ಪರೋಕ್ಷವಾಗಿ ಕಾಶ್ಯಪ್ಪನವರು ಮತ್ತು ಯತ್ನಾಳ್ ವಿರುದ್ಧ ಸಚಿವ ನಿರಾಣಿ ಹರಿಹಾಯ್ದರು.
ಯತ್ನಾಳ್ಗೆ ಸಚಿವ ಸಿಸಿ ಪಾಟೀಲ್ ಟಾಂಗ್: ಕೆಲವರು ಮೀಸಲಾತಿ ಕುರಿತು ಟೀಕೆ ಟಿಪ್ಪಣಿ ಮಾಡುತ್ತಲೇ ಇದ್ದಾರೆ, ಅಂತವರ ಮಾತುಗಳಿಗೆ ಕಿವಿಗೊಡಬೇಡಿ ಎಂದು ವಿಜಯಪುರ ಶಾಸಕ ಯತ್ನಾಳ್ಗೆ ಸಚಿವ ಸಿಸಿ ಪಾಟೀಲ್ ಟಾಂಗ್ ಕೊಟ್ಟಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರದ ಹನಗವಾಡಿ ಗ್ರಾಮದ ಬಳಿ ನಡೆಯುತ್ತಿರುವ ಹರ ಜಾತ್ರೆಯ ಮೀಸಲಾತಿಗಾಗಿ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಯವರು ಮೀಸಲಾತಿ ನೀಡುವ ಸಲುವಾಗಿ ಪ್ರಯತ್ನ ಮುಂದುವರೆಸಿದ್ದಾರೆ.
ಸಿಎಂ ಅವರು ಇಡೀ ಪಂಚಮಸಾಲಿ ಸಮಾಜಕ್ಕೆ ಕೆಲವೇ ದಿನಗಳಲ್ಲಿ ಸಿಹಿ ಸುದ್ದಿ ಕೊಡಲಿದ್ದಾರೆ. ಆದರೆ ಕೆಲವರು ಮಾಡ್ತಿರುವ ಟೀಕೆ ಟಿಪ್ಪಣಿಗಳಿಗೆ ಪಂಚಮಸಾಲಿ ಮಂದಿ ತಲೆ ಕೆಡಿಸಿಕೊಳ್ಳಬಾರದು, ನಾವೆಲ್ಲ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಮೇಲೆ ವಿಶ್ವಾಸ ಇಡೋಣ ಖಂಡಿತವಾಗಿ ಮೀಸಲಾತಿ ಸಿಗುತ್ತದೆ. ಅದನ್ನು ಬಿಟ್ಟು ಬೇರೊಬ್ಬರ ಬಗ್ಗೆ ಹಗುರವಾಗಿ ಮಾತನಾಡುವುದರಿಂದ ಮೀಸಲಾತಿ ಸಿಗುವುದಿಲ್ಲ. ವಾಕ್ ಸ್ವಾತಂತ್ರ್ಯ ಇದೆ ಎಂದು ಬಾಯಿಗೆ ಬಂದಂತೆ ಮಾತನಾಡಬಾರದು ಎಂದು ಶಾಸಕ ಯತ್ನಾಳ್ ಹಾಗೂ ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಶ್ರೀಗೆ ಸಚಿವ ಸಿಸಿ ಪಾಟೀಲ್ ಟಾಂಗ್ ನೀಡಿದರು.
ಹರಜಾತ್ರೆಯಲ್ಲಿ ‘‘ರೈತ ರತ್ನ’’ ಸಮಾವೇಶ ಉದ್ಘಾಟಿಸಿದ ಸಿಎಂ: ಸಿಎಂ ಬಸವರಾಜ್ ಬೊಮ್ಮಾಯಿ ಅವರು ಹರಜಾತ್ರೆಯಲ್ಲಿ ರೈತ ರತ್ನ ಸಮಾವೇಶ ಉದ್ಘಾಟಿಸಿ ಪಂಚಮ ಸಾಲಿ ಸಮಾಜ ವೀರ ಸೇನಾನಿಗಳ ಭಾವ ಚಿತ್ರಗಳಿಗೆ ಪುಷ್ಪಾರ್ಪಣೆ ಮಾಡಿದರು. ಬಳಿಕ ಹರ ಜಾತ್ರೆಯಲ್ಲಿ ಸಂಕ್ರಾಂತಿ ಸಂಭ್ರಮ ಹಿನ್ನೆಲೆಯಲ್ಲಿ ವಚನಾನಂದ ಶ್ರೀಯವರು ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಎಳ್ಳು ಬೆಲ್ಲ ತಿನ್ನಿಸಿ ಸಂಕ್ರಮಣದ ಶುಭಾಶಯ ಹೇಳಿದರು. ಇದೇ ವೇಳೆ ಸಚಿವರುಗಳಾದ ಸಿಸಿ ಪಾಟೀಲ್, ಮುರುಗೇಶ್ ನಿರಾಣಿ, ಬಿಸಿ ಪಾಟೀಲ್, ಮುನೇನಕೊಪ್ಪ, ಸಂಸದ ಜಿಎಂ ಸಿದ್ದೇಶ್ವರ ಮತ್ತು ಇತರ ಶಾಸಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: ನಮಗೂ ಮಾತನಾಡುವುದಕ್ಕೆ ಬರುತ್ತದೆ, ಸುಮ್ಮನೆ ಇದ್ದೀವಿ ಅಂದರೆ ದೌರ್ಬಲ್ಯ ಅಲ್ಲ: ಯತ್ನಾಳ್ಗೆ ನಿರಾಣಿ ಟಾಂಗ್