ಹರಿಹರ : ನಗರ ವ್ಯಾಪ್ತಿಯಲ್ಲಿರುವ ನೇಕಾರ ಬಡಾವಣೆಗೆ ಕನಿಷ್ಠ ಮೂಲಭೂತ ಸೌಕರ್ಯಗಳಾದ ನೀರು, ವಿದ್ಯುತ್, ರಸ್ತೆ, ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ನೇಕಾರ ಸಮಿತಿ ಟ್ರಸ್ಟ್ ವತಿಯಿಂದ ಪೌರಾಯುಕ್ತರ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ನಗರಸಭೆ ಆವರಣದಲ್ಲಿ ನೇಕಾರ ಟ್ರಸ್ಟ್ ಅಧ್ಯಕ್ಷ ಎಚ್.ಕೆ.ಕೊಟ್ರಪ್ಪ, ಪೌರಾಯುಕ್ತೆ ಎಸ್. ಲಕ್ಷ್ಮೀ ಅವರಿಗೆ ಮನವಿ ನೀಡಿ ಮಾತನಾಡಿ, ಸುಮಾರು ದಶಕಗಳ ಹಿಂದೆಯೇ ಇಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆಯಾಗಿದ್ದು, 2016 ರಲ್ಲಿ ಕೆಲವರಿಗೆ ಮನೆ ಕಟ್ಟಲು ಸರ್ಕಾರದಿಂದ ಅನುದಾನ ದೊರಕಿಸಲಾಗಿದೆ. ಅದರಲ್ಲೀಗ 11 ಮನೆಗಳ ನಿರ್ಮಾಣ ಸಂಪೂರ್ಣವಾಗಿದ್ದು, ಸುಮಾರು 40 ಮನೆಗಳು ನಿರ್ಮಾಣ ಹಂತದಲ್ಲಿವೆ. ಈಗಾಗಲೇ ಮನೆ ನಿರ್ಮಾಣವಾಗಿ ವಾಸ ಮಾಡುವವರಿಗೆ ಕುಡಿಯುವ ನೀರು ಹಾಗೂ ವಿದ್ಯುತ್ ಸಂಪರ್ಕದ ಅವಶ್ಯಕತೆಯಿದ್ದು ಮೂಲಭೂತ ಸೌಕರ್ಯಗಳಾದ ನೀರು, ವಿದ್ಯುತ್, ರಸ್ತೆ, ಚರಂಡಿ ಸೌಕರ್ಯವನ್ನು ತ್ವರಿತವಾಗಿ ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಪೌರಾಯುಕ್ತೆ ಎಸ್. ಲಕ್ಷ್ಮೀ, ಶಾಸಕ ರಾಮಪ್ಪ ಈ ಭಾಗಕ್ಕೆ ತಮ್ಮ ಅನುದಾನದಲ್ಲಿ ಕೊಳವೆ ಬಾವಿ ನಿರ್ಮಿಸಿ ಕೊಡುವ ಭರವಸೆ ನೀಡಿದರು. ವಿದ್ಯುತ್ ಸಂಪರ್ಕಕ್ಕಾಗಿ ಸಂಬಂಧಿಸಿದ ಇಲಾಖೆಗಳಿಗೆ ಪತ್ರವನ್ನೂ ಕಳುಹಿಸಲಾಗಿದೆ. ಮಹಾಮಾರಿ ಕೊರೊನಾ ಬಂದ ಹಿನ್ನೆಲೆಯಲ್ಲಿ ಕಾಮಗಾರಿಗಳು ಸ್ಥಗಿತಗೊಂಡಿರುವುದಾಗಿ ಸ್ಪಷ್ಟನೆ ನೀಡಿದರು.