ದಾವಣಗೆರೆ: ಹೊನ್ನಾಳಿ ಪಟ್ಟಣದಲ್ಲಿ ಆಹಾರ ಕಿಟ್ ವಿತರಣೆ ಹಾಗೂ ನಿತ್ಯ ಊಟದ ವ್ಯವಸ್ಥೆ ವಿಚಾರ ಈಗ ರಾಜಕೀಯ ಬಣ್ಣ ಪಡೆದಿದೆ. ಮಾಜಿ ಶಾಸಕ ಶಾಂತನಗೌಡ ಜೊತೆ ಮಾತನಾಡಿದ ವಿಡಿಯೋವನ್ನು ಸ್ವತಃ ಹೊನ್ನಾಳಿ ಬಿಜೆಪಿ ಶಾಸಕ ರೇಣುಕಾಚಾರ್ಯ ಬಿಡುಗಡೆ ಮಾಡಿದ್ದಾರೆ.
ಈ ವಿಡಿಯೋದಲ್ಲಿ ಕಾಂಗ್ರೆಸ್ ಮಾಜಿ ಶಾಸಕ ಶಾಂತನಗೌಡರಿಗೆ ತರಾಟೆಗೆ ತೆಗೆದುಕೊಂಡಿರುವ ರೇಣುಕಾಚಾರ್ಯ, ನೀವ್ಯಾರ್ರೀ ನನ್ಗೆ ಹೇಳೋಕೆ. ಮುಖ್ಯಮಂತ್ರಿನಾ, ಎಂಪಿನಾ, ಜಿಲ್ಲಾ ಉಸ್ತುವಾರಿ ಸಚಿವರಾ. ಇಷ್ಟು ದಿನ ಎಲ್ಲಿ ಹೋಗಿದ್ದೀರಿ. ನಾನ್ಯಾಕೆ ನಿಮಗೆ ಸ್ಪಷ್ಟನೆ ಕೊಡಬೇಕು ಎಂದು ಖಾರವಾಗಿಯೇ ಪ್ರಶ್ನಿಸಿದ್ದಾರೆ. ಮಾಧ್ಯಮಗಳಲ್ಲಿ ರೇಣುಕಾಚಾರ್ಯರಿಗೆ ಕರೆ ಮಾಡಿ ಶಾಂತನಗೌಡರು ತರಾಟೆಗೆ ತೆಗೆದುಕೊಂಡರು ಎಂಬ ರೀತಿಯಲ್ಲಿ ಸುದ್ದಿಯಾಗಿದೆ.
ನಾನು ಕೊರೊನಾ ಭೀತಿ ಶುರುವಾದ ದಿನದಿಂದಲೂ ಜನರ ಸಂಕಷ್ಟಕ್ಕೆ ಸ್ಪಂದಿಸಿದ್ದೇನೆ. ನಿತ್ಯವೂ ಊಟದ ವ್ಯವಸ್ಥೆ, ಆಹಾರ ಕಿಟ್ ವಿತರಣೆ ಮಾಡುತ್ತಿದ್ದೇನೆ. ಈ ಒಳ್ಳೆಯ ಕೆಲಸ ಸಹಿಸದೇ ವಿನಾಕಾರಣ ರಾಜಕಾರಣ ಮಾಡುವುದು ಸರಿಯಲ್ಲ. ಜನರ ಕಷ್ಟಕ್ಕೆ ಸಾಧ್ಯವಾದ್ರೆ ಸ್ಪಂದಿಸಿ. ಅದನ್ನು ಬಿಟ್ಟು ಬೇರೆ ರೀತಿಯಲ್ಲಿ ಮಾತನಾಡಿದರೆ ಸರಿ ಇರುವುದಿಲ್ಲ ಎಂದು ಸಿಟ್ಟಿನಿಂದಲೇ ರೇಣುಕಾಚಾರ್ಯ ಫೋನ್ ಕಟ್ ಮಾಡಿದ್ದಾರೆ.
ಕಷ್ಟದಲ್ಲಿರುವವರಿಗೆ 15 ಸಾವಿರ ಆಹಾರ ಕಿಟ್ ಹಾಗೂ 2 ರಿಂದ 3 ಸಾವಿರ ಜನರಿಗೆ ನಿತ್ಯವೂ ಊಟದ ವ್ಯವಸ್ಥೆಯನ್ನು ವೈಯಕ್ತಿಕವಾಗಿ ರೇಣುಕಾಚಾರ್ಯ ಮಾಡಿಲ್ಲ. ಸರ್ಕಾರ ಹಾಗೂ ದಾನಿಗಳಿಂದ ಸಂಗ್ರಹಿಸಿ ವಿತರಿಸಿದ್ದಾರೆ. ಈ ಬಗ್ಗೆ ಚರ್ಚಿಸಲು ತಹಶೀಲ್ದಾರ್ ಕಚೇರಿಗೆ ಬರುವಂತೆ ಆಹ್ವಾನಿಸಿ ಶಾಸಕರು ಪಲಾಯನ ಮಾಡಿದ್ದಾರೆ ಎಂದು ಶಾಂತನಗೌಡ ಆರೋಪಿಸಿದ್ದರು. ಇದರಿಂದ ಶಾಸಕ ರೇಣುಕಾಚಾರ್ಯ ಅವರು ಶಾಂತನಗೌಡ ವಿರುದ್ಧ ಗರಂ ಆಗಿದ್ದಾರೆ.