ದಾವಣಗೆರೆ : ವೈದ್ಯರ ಚೀಟಿ ಇಲ್ಲದೆ ಮಾತ್ರೆ ಕೊಡಲು ಔಷಧಿ ಅಂಗಡಿಯವರು ನಿರಾಕರಿಸಿದ್ದರಿಂದ ಯುವಕರ ಗುಂಪೊಂದು ದಾಂಧಲೆ ಮಾಡಿ, ಹಲ್ಲೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಜಿಲ್ಲೆಯ ಹರಿಹರದಲ್ಲಿ ನಿನ್ನೆ ನಡೆದಿದೆ.
ಅಹಮ್ಮದ್ ಪೈಲ್ವಾನ್, ಖಾಲಿದ್ ಸಿದ್ದಿಕ್ ಚಾರ್ಲಿ, ಆಸೀಫ್, ನದೀಮ್ ಬಂಧಿತರು ಎಂದು ಹರಿಹರ ನಗರ ಠಾಣೆಯ ಪೊಲೀಸರು ಮಾಹಿತಿ ನೀಡಿದ್ದಾರೆ. ಮಾತ್ರೆ ಕೊಡುವಂತೆ ಬಂಧಿತರ ಗುಂಪು ಮೆಡಿಕಲ್ಸ್ ಬಳಿ ಆಗಮಿಸಿದೆ. ಈ ವೇಳೆ ಔಷಧಿ ಕೊಡಲು ವೈದ್ಯರ ಚೀಟಿ ಕೇಳಿದ್ದಕ್ಕೆ ಸಿಟ್ಟಿಗೆದ್ದ ನಾಲ್ವರು ಔಷಧ ಅಂಗಡಿಯಲ್ಲಿ ದಾಂಧಲೆ ನಡೆಸಿ, ಹಲ್ಲೆ ಮಾಡಿರುವ ಘಟನೆ ಸೋಮವಾರ ನಡೆದಿದೆ.
'ಅಹಮ್ಮದ್ ಪೈಲ್ವಾನ್ ಮತ್ತು ಆಸಿಫ್ ಅವರು ಮೆಡಿಕಲ್ ಶಾಪ್‌ಗೆ ಬಂದು ಮಾತ್ರೆ ಕೇಳಿದರು. ಆಗ ನಾನು ವೈದ್ಯರ ಚೀಟಿ ಇದ್ದರೆ ಮಾತ್ರ ಔಷಧ ಕೊಡಲಾಗುವುದೆಂದು ತಿಳಿಸಿದ್ದೆ. ಇಲ್ಲದಿದ್ದರೆ ಕೊಡಲಾಗಲ್ಲ, ವೈದ್ಯರ ಚೀಟಿ ತನ್ನಿ ಎಂದು ಹೇಳಿ ವಾಪಸ್ ಕಳುಹಿಸಿದ್ದೆ. ಇದರಿಂದ ಸಿಟ್ಟಿಗೆದ್ದ ಅಹಮ್ಮದ್ ಮತ್ತು ಅಸಿಫ್ ಅವರು, ಖಾಲಿದ್, ಸಿದ್ದಿಖ್ ಚಾರ್ಲಿ ಎಂಬುವರೊಂದಿಗೆ ಆಯುಧಗಳೊಂದಿಗೆ ಅಂಗಡಿಯ ಗಾಜು, ಸಾಮಗ್ರಿಗಳನ್ನು ಒಡೆದು, ಹಲ್ಲೆ ನಡೆಸಿದರು' ಎಂದು ಅಂಗಡಿ ಮಾಲೀಕ ಅಮಾನುದ್ದೀನ್ ದೂರು ನೀಡಿದ್ದಾರೆ.
ಸಾರ್ವಜನಿಕರ ಸಹಾಯದಿಂದ ಆರೋಪಿಗಳನ್ನು ಬೆನ್ನಟ್ಟಿ ಹಿಡಿಯಲಾಗಿದೆ. ಈ ವೇಳೆ ಆರೋಪಿಗಳು ನನ್ನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು ಎಂದು ಅಮಾನುದ್ದೀನ್ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ಹರಿಹರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಹರಿಹರ ನಗರ ಪೊಲೀಸ್ ಠಾಣೆಯ ಪಿ ಐ ದೇವಾನಂದ ಪ್ರತಿಕ್ರಿಯಿಸಿ, "ಯುವಕರ ಗುಂಪು ಮೆಡಿಕಲ್ನಲ್ಲಿ ನಿದ್ದೆ ಮಾತ್ರೆ ಕೇಳಿದ್ದಾರೆ. ಈ ವೇಳೆ ಅಂಗಡಿಯವರು ನಿದ್ದೆ ಮಾತ್ರೆ ಕೊಡಲು ಬರುವುದಿಲ್ಲ, ನಿಮ್ಮ ಬಳಿ ವೈದ್ಯರ ಚೀಟಿ ಇದ್ರೇ ಕೊಡಿ. ಆಮೇಲೆ ಮಾತ್ರೆ ಕೊಡುವುದಾಗಿ ಹೇಳಿದ್ದಾರೆ. ಇದರಿಂದ ಯುವಕರ ಗುಂಪು ಗಲಾಟೆ ಮಾಡಿ, ರಾಡ್ನಿಂದ ಇಡೀ ಅಂಗಡಿಯ ಗಾಜುಗಳನ್ನು ಒಡೆದು ಹಾಕಿ, ಹಲ್ಲೆ ಮಾಡಿದ್ದರಿಂದ ಅವರನ್ನು ಬಂಧಿಸಲಾಗಿದೆ" ಎಂದಿದ್ದಾರೆ.
ಇದನ್ನೂ ಓದಿ: ಮಾರಕಾಸ್ತ್ರಗಳೊಂದಿಗೆ ಗ್ರಾಮಕ್ಕೆ ನುಗ್ಗಿದ ಪುಡಿ ರೌಡಿಗಳು: ಪುಂಡರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ಜನರು