ದಾವಣಗೆರೆ : ಜಿಲ್ಲೆಯ ಬಹುದೊಡ್ಡ ವಿಧಾನಸಭಾ ಕ್ಷೇತ್ರ ಎಂದು ಖ್ಯಾತಿ ಗಳಿಸಿರುವ ಮಾಯಕೊಂಡ ವಿಧಾನಸಭಾ ಕ್ಷೇತ್ರದಲ್ಲಿ ಬಂಡಾಯದ ಬೆಂಕಿ ಹೊತ್ತಿಕೊಂಡಿದೆ. ಈಗಾಗಲೇ ಬಿಜೆಪಿ ಹೈಕಮಾಂಡ್ ಮಾಜಿ ಬಿಜೆಪಿ ಶಾಸಕ ಬಸವರಾಜ್ ನಾಯ್ಕ್ ಅವರಿಗೆ ಟಿಕೆಟ್ ಘೋಷಣೆ ಮಾಡಿದ್ದು, ಉಳಿದ ಹನ್ನೊಂದು ಜನ ಟಿಕೆಟ್ ಆಕಾಂಕ್ಷಿಗಳು ಬಸವರಾಜ್ ನಾಯ್ಕ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದು ಹನ್ನೊಂದು ಆಕಾಂಕ್ಷಿಗಳೂ ಸೇರಿ ಒಬ್ಬ ಬಂಡಾಯ ಅಭ್ಯರ್ಥಿಯನ್ನು ಅವರ ವಿರುದ್ಧ ನಿಲ್ಲಿಸಲು ನಿರ್ಧರಿಸಿದ್ದಾರೆ.
ಮಾಯಕೊಂಡ ಕ್ಷೇತ್ರದಲ್ಲಿ ಬಿಜೆಪಿಯಿಂದ ಮಾಜಿ ಶಾಸಕ ಬಸವರಾಜ್ ನಾಯ್ಕ್ ಅವರಿಗೆ ಟಿಕೆಟ್ ನೀಡಿದ್ದು, ಪ್ರಚಾರ ಕೂಡ ಆರಂಭಿಸಿದ್ದಾರೆ. ಇದಲ್ಲದೆ ಪ್ರಚಾರದ ವೇಳೆ ಹಾಲಿ ಶಾಸಕ ಪ್ರೋ ಲಿಂಗಣ್ಣನವರು ಕೂಡ ತಮ್ಮ ಅಭ್ಯರ್ಥಿ ಬಸವರಾಜ್ ನಾಯ್ಕ್ ಅವರೊಂದಿಗೆ ಭಾಗಿಯಾಗಿ ಅಚ್ಚರಿಯಂತೆ ಮತ ಯಾಚಿಸಿದ್ರು. ಬಸವರಾಜ್ ನಾಯ್ಕ್ಗೆ ಟಿಕೆಟ್ ಘೋಷಣೆಯಾದ ಬೆನ್ನಲ್ಲೇ ಅವರದ್ದೇ ಬಿಜೆಪಿಯ ಹನ್ನೊಂದು ಮಂದಿ ಟಿಕೆಟ್ ಆಕಾಂಕ್ಷಿಗಳಿಂದ ಬಂಡಾಯದ ಬೆಂಕಿ ಹೊತ್ತಿಕೊಂಡಿದೆ. ಅವರೀಗ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹನ್ನೊಂದು ಮಂದಿ ಬಿಜೆಪಿ ಟಿಕೆಟ್ ಆಕಾಂಕ್ಷಿಗಳೆಲ್ಲ ಸೇರಿ ಓರ್ವ ಅಭ್ಯರ್ಥಿಯನ್ನು ಬಸವರಾಜ್ ನಾಯ್ಕ್ ವಿರುದ್ಧ ಕಣಕ್ಕಿಳಿಸಲು ನಿರ್ಧಾರ ಮಾಡಿದ್ದು, ಬಿಜೆಪಿ ಅಭ್ಯರ್ಥಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ. ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ ಬಸವರಾಜ್ ನಾಯ್ಕ್, "ಬಿಜೆಪಿಯಿಂದ ಅಭ್ಯರ್ಥಿ ಘೋಷಣೆ ಮಾಡಿದ್ದು, ಇಂದು ಮೊದಲ ಬಾರಿಗೆ ಕುರಡಿ ಗ್ರಾಮದ ದೇವಾಲಯದಲ್ಲಿ ಪೂಜೆ ಕಾರ್ಯಕ್ರಮ ಮಾಡಿ ಪ್ರಚಾರ ಆರಂಭಿಸಿದ್ದೇವೆ. ಹಾಲಿ ಶಾಸಕ ಪ್ರೋ ಲಿಂಗಣ್ಣ ಹಾಗೂ ಶಿವಯೋಗಿ ಸ್ವಾಮಿಯವರು ನನಗೆ ಸಾಥ್ ನೀಡ್ತಿದ್ದಾರೆ. ಮಾಯಕೊಂಡ ಕ್ಷೇತ್ರದಲ್ಲಿ ಬಿಜೆಪಿ ಸಾಕಷ್ಟು ಬಾರಿ ಗೆಲುವು ಸಾಧಿಸಿದೆ. ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಅದರ ಮೇಲೆ ಗೆಲುವು ಸಾಧಿಸಲಿದ್ದೇನೆ" ಎಂದು ಬಂಡಾಯದ ಬಗ್ಗೆ ಮಾತನಾಡಲು ನಿರಾಕರಿಸಿದರು.
ಆಕಾಂಕ್ಷಿಗಳ ಸಭೆ : ಹನ್ನೊಂದು ಜನ ಟಿಕೆಟ್ ಆಕಾಂಕ್ಷಿಗಳು ಒಂದೆಡೆ ಸೇರಿ ಸಭೆ ನಡೆಸಿದ ಬಳಿಕ ಈ ನಿರ್ಧಾರಕ್ಕೆ ಬರಲಾಗಿದೆ. ಯುವ ಮುಖಂಡ ಹಾಗೂ ಹಾಲಿ ಪಾಲಿಕೆ ಸದಸ್ಯ ಆರ್.ಎಲ್ ಶಿವಪ್ರಕಾಶ ಅವರನ್ನು ಬಿಜೆಪಿ ಅಭ್ಯರ್ಥಿ ಬಸವರಾಜ್ ನಾಯ್ಕ್ ವಿರುದ್ಧ ಬಂಡಾಯ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ನಿರ್ಧಾರ ಮಾಡಲಾಗಿದೆ. ಈಗಾಗಲೇ ಮೂರು ಬಾರಿ ಬಸವರಾಜ್ ನಾಯಕ್ಗೆ ಪಕ್ಷ ಟಿಕೆಟ್ ನೀಡಿದ್ದರಿಂದ ಬಿಜೆಪಿಯಲ್ಲಿ ಹೊಸ ಮುಖಗಳಿಗೆ ಆದ್ಯತೆ ನೀಡುವಂತೆ ಆಗ್ರಹಿಸಿ ಆಕಾಂಕ್ಷಿಗಳು ಬಂಡಾಯ ಎದ್ದಿದ್ದಾರೆ ಎಂದರು.
ಈ ಹಿಂದೆ ಬಸವರಾಜ್ ನಾಯ್ಕ್ ಅವರನ್ನು 2008ರಲ್ಲಿ ಕಾಂಗ್ರೆಸ್ನಿಂದ ಕರೆತಂದು ಬಿಜೆಪಿ ಟಿಕೆಟ್ ನೀಡಿತ್ತು. ಪಕ್ಷ ವಿರೋಧಿ ಆಗಿದ್ದ ಬಸವರಾಜ್ ನಾಯ್ಕಗೆ ಟಿಕೆಟ್ ನೀಡಿದ್ದನ್ನು ವಿರೋಧಿಸಿ ಬಿಜೆಪಿಗೆ ಬಂಡಾಯದ ಬಿಸಿ ಮುಟ್ಟಿಸಲು ಹನ್ನೊಂದು ಜನ ಟಿಕೆಟ್ ಆಕಾಂಕ್ಷಿಗಳು ಮುಂದಾಗಿದ್ದಾರೆ. ಇನ್ನು ಈ ವೇಳೆ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ಮಾತನಾಡಿದ ಹಾಲಿ ಶಾಸಕ ಪ್ರೋ ಲಿಂಗಣ್ಣ, ನಾನು ಬಿಜೆಪಿ ಕಾರ್ಯಕರ್ತ ಬಿಜೆಪಿ ಪಕ್ಷ ನನಗೆ ಶಾಸಕನನ್ನಾಗಿ ಮಾಡಿದೆ. ಬಸವರಾಜ್ ನಾಯ್ಕ್ ಅವರಿಗೆ ಪಕ್ಷ ಟಿಕೆಟ್ ಕೊಟ್ಟಿದೆ. ಅವರನ್ನು ಗೆಲ್ಲಿಸುವುದು ನನ್ನ ಜವಾಬ್ದಾರಿ ಎಂದು ಹೇಳಿದರು.
ಬಂಡಾಯ ಅಭ್ಯರ್ಥಿ ಹೇಳೋದೇನು? : ಈಟಿವಿ ಭಾರತ್ನೊಂದಿಗೆ ಮಾತನಾಡಿದ ಬಂಡಾಯ ಅಭ್ಯರ್ಥಿ ಶಿವಪ್ರಕಾಶ್, ಮಾಯಕೊಂಡಕ್ಕೆ ನಾವು 11 ಜನ ಆಕಾಂಕ್ಷಿಗಳಿದ್ದು, 10 ಜನ ಆಕಾಂಕ್ಷಿಗಳು ಸೇರಿ ಒಬ್ಬ ಅಭ್ಯರ್ಥಿಯನ್ನು ಬಸವರಾಜ್ ನಾಯ್ಕ್ ವಿರುದ್ಧ ಕಣಕ್ಕಿಳಿಸುತ್ತಿದ್ದಾರೆ. ನನ್ನನ್ನು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಬಸವರಾಜ್ ನಾಯಕ್ಗೆ ಟಿಕೆಟ್ ಕೊಟ್ಟಿದ್ದು, ಅವರ ಮೇಲೆ ನಮಗೆ ಹಾಗೂ ಕಾರ್ಯಕರ್ತರಿಗೆ ವಿಶ್ವಾಸ ಇಲ್ಲದೇ ಇರುವುದರಿಂದ ಬಂಡಾಯ ಅಭ್ಯರ್ಥಿ ನಿಲ್ಲಿಸುತ್ತಿದ್ದಾರೆ. ಬಸವರಾಜ್ ನಾಯ್ಕ್ ಸ್ಪರ್ಧೆ ಮಾಡಿದ್ರೆ ಸೋಲುವುದು ಖಚಿತ ಎಂದು ತಿಳಿಸಿದರು.
ಇದನ್ನೂ ಓದಿ : ಕಾಂಗ್ರೆಸ್ ಟಿಕೆಟ್ ಮಿಸ್; ಜೆಡಿಎಸ್ ಸೇರಿದ ರಘು ಆಚಾರ್