ದಾವಣಗೆರೆ: ಎಸ್ಎಸ್ಎಲ್ಸಿ ಹಾಗೂ ಪದವಿ ಪರೀಕ್ಷೆಗಳನ್ನು ನಡೆಸಬಾರದು ಎಂದು ಒತ್ತಾಯಿಸಿ ನಗರದ ಜಯದೇವ ವೃತ್ತದಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಬಳಿಕ ಮಾತನಾಡಿದ ವಾಟಾಳ್ ನಾಗರಾಜ್, ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆ ರಾಜ್ಯ ಸರ್ಕಾರ ಯಾವ ಪರೀಕ್ಷೆಯನ್ನೂ ನಡೆಸಬಾರದು. ಆನ್ಲೈನ್ ಪಾಠ ಕೈಬಿಡಬೇಕೆಂದು ಒತ್ತಾಯಿಸಿ ಜೂನ್ 20ರಂದು ಬೆಂಗಳೂರಿನಲ್ಲಿ ಹೋರಾಟ ನಡೆಸಲಾಗುವುದು ಎಂದು ಇದೇ ವೇಳೆ ತಿಳಿಸಿದರು.
ವಿದ್ಯಾರ್ಥಿಗಳಿಗಾಗಿ ಜೈಲಿಗೆ ಹೋಗಲು ಸಿದ್ಧ. ಎಸ್ಎಸ್ಎಲ್ಸಿ ಹಾಗೂ ಪದವಿ ಪರೀಕ್ಷೆ ನಡೆಸದೆ ಎಲ್ಲಾ ವಿದ್ಯಾರ್ಥಿಗಳನ್ನು ಪಾಸ್ ಮಾಡಬೇಕು. ಬೇಡಿಕೆ ಈಡೇರುವವರೆಗೆ ಹೋರಾಟ ನಿಲ್ಲದು. ಆನ್ಲೈನ್ನಲ್ಲಿ ಪಾಠ ಮಾಡುವುದನ್ನು ಕೈಬಿಡಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಬಳಿ ಲ್ಯಾಪ್ಟಾಪ್ ಇಲ್ಲ. ಉನ್ನತ ಶಿಕ್ಷಣ ಸಚಿವ, ಪ್ರಾಥಮಿಕ ಶಿಕ್ಷಣ ಸುರೇಶ್ ಕುಮಾರ್ ಇದನ್ನು ಅರ್ಥ ಮಾಡಿಕೊಳ್ಳಬೇಕು.
ಪೋಷಕರು ಹಾಗೂ ವಿದ್ಯಾರ್ಥಿಗಳ ಆತಂಕ ಅರಿತು ನಿರ್ಧಾರ ತೆಗೆದುಕೊಳ್ಳಬೇಕು. ಉನ್ನತ ಶಿಕ್ಷಣ ಸಚಿವರು ಹಾಗೂ ಪ್ರಾಥಮಿಕ ಶಿಕ್ಷಣ ಸಚಿವರು ಎಲ್ಲಾ ವ್ಯವಸ್ಥೆ ಮಾಡಿದ್ದೇವೆ ಎಂದಿದ್ದಾರೆ. ಆದ್ರೆ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.