ಹುಬ್ಬಳ್ಳಿ : ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಜೂನ್ ತಿಂಗಳಲ್ಲಿ ನಡೆಸಲು ಮುಂದಾಗಿರುವ ಸರ್ಕಾರದ ಕ್ರಮ ಆತುರದ್ದಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಜತ್ ಉಳ್ಳಾಗಡ್ಡಿ ಮಠ ತಿಳಿಸಿದ್ದಾರೆ.
ಕೊರೊನಾ ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಮೇ ಮತ್ತು ಜೂನ್ ತಿಂಗಳ ಮೊದಲ ವಾರ ಬಹಳ ನಿರ್ಣಾಯಕವೆಂದು ಹಲವು ಸಾಂಕ್ರಾಮಿಕ ರೋಗ ತಜ್ಞರು ಹೇಳಿದ್ದಾರೆ. ಕೊರೊನಾಗೆ ಸಂಬಂಧಿಸಿದಂತೆ ವಿದೇಶಗಳಲ್ಲಿ ಮತ್ತು ಬೇರೆ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು, ಸೇರಿದಂತೆ ಸುಮಾರು 75,000 ಮಂದಿ ಕನ್ನಡಿಗರು ಮೇ ತಿಂಗಳ ಅಂತ್ಯದೊಳಗೆ ಬರಲಿದ್ದಾರೆ. ಇದರಿಂದ ಕೊರೊನಾ ಹರಡುವ ಸಾಧ್ಯತೆ ಹೆಚ್ಚಿದೆ.
ಕೊರೊನಾ ಹೋರಾಟ ದೀರ್ಘಕಾಲಿನವಾಗಿದ್ದು, ವಾಸ್ತವಿಕತೆಯನ್ನು ಅರಿತು ಸರ್ಕಾರ ಹೆಜ್ಜೆ ಇಡಬೇಕು. ವಲಸೆ ಕಾರ್ಮಿಕರ ವಿಚಾರದಲ್ಲಿ ಆದ ತಪ್ಪನ್ನು ಇಲ್ಲಿ ಪುನರಾವರ್ತನೆ ಮಾಡಬಾರದು. ಪರೀಕ್ಷೆಯನ್ನು ಮುಂದೂಡುವುದು ಉಚಿತ ಎಂದು ಉಳ್ಳಾಗಡ್ಡಿಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.