ದಾವಣಗೆರೆ: ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿರುವ ಹಳೇ ದಾವಣಗೆರೆ, ಹೊಸ ದಾವಣಗೆರೆ ಸಂಪರ್ಕಿಸುವ ರೈಲ್ವೆ ಓವರ್ ಬ್ರಿಡ್ಜ್ ಕನಸಾಗಿಯೇ ಉಳಿದಿದೆ. ಪ್ರತಿನಿತ್ಯ ಸಾವಿರಾರು ವಾಹನ ಸಂಚರಿಸುವ ಈ ಮಾರ್ಗದಲ್ಲಿ ರೈಲ್ವೆ ಓವರ್ ಬ್ರಿಡ್ಜ್ ಮಾಡುವಂತೆ ಸಾಕಷ್ಟು ಬಾರಿ ಹೋರಾಟ ಮಾಡಿಕೊಂಡು ಬಂದರೂ ಇಂದಿಗೂ ಓವರ್ ಬ್ರಿಡ್ಜ್ ನಿರ್ಮಾಣವಾಗಿಲ್ಲ. ಇದರಿಂದ ಜನರು ನಿತ್ಯ ನರಕ ಅನುಭವಿಸುತ್ತಿದ್ದಾರೆ ಎಂಬುದು ಸಾರ್ವಜನಿಕರ ದೂರು.
ಮೂರು ಬಾರಿ ಸಂಸದರಾಗಿರುವ ಜಿ ಎಂ ಸಿದ್ದೇಶ್ವರ್ ನಾಲ್ಕನೇ ಬಾರಿ ಸಂಸದರಾಗಿ ಆಯ್ಕೆಯಾಗಿದ್ದರೂ ಸಮಸ್ಯೆ ಬಗೆಹರಿಸುವ ಗೋಜಿಗೆ ಹೋಗಿಲ್ಲ ಅಂತಾರೆ ಇಲ್ಲಿನ ಜನರು.
'ಸ್ಮಾರ್ಟ್ ಸಿಟಿ'ಯಲ್ಲಿ ಸ್ಮಾರ್ಟ್ ಆಗದೇ ಉಳಿದ ರೈಲ್ವೆ ಓವರ್ ಬ್ರಿಡ್ಜ್ ಅಶೋಕ ರೈಲ್ವೆ ಬ್ರಿಡ್ಜ್ ನಿರ್ಮಾಣಕ್ಕೆ ಆಗ್ರಹಿಸಿ ಈ ಹಿಂದೆ ಜಿಲ್ಲಾ ಜೆಡಿಎಸ್ ಪಕ್ಷ ಬೃಹತ್ ಧರಣಿ ಸತ್ಯಾಗ್ರಹ ನಡೆಸಿತ್ತು. ಅಂದು ಜಿಲ್ಲಾಧಿಕಾರಿಯಾಗಿದ್ದ ಡಿ.ಎಸ್. ರಮೇಶ್ ಬಳಿಕ ಬಂದ ಡಿಸಿ ಗೌತಮ್ ಬಗಾದಿ ಮತ್ತು ಹಾಲಿ ಇರುವ ಡಿ ಸಿ ಮಹಾಂತೇಶ್ ಬೀಳಗಿಯವರು ಬ್ರಿಡ್ಜ್ ನಿರ್ಮಿಸುವ ಭರವಸೆ ನೀಡುತ್ತಲೇ ಬಂದಿದ್ದಾರೆ. ಆದರೆ ಇದುವರೆಗೂ ಕಾಮಗಾರಿ ಮಾತ್ರ ಶುರುವಾಗಿಲ್ಲ ಎಂದು ಅಮಾನುಲ್ಲಾ ಖಾನ್ ದೂರಿದ್ದಾರೆ. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಖುದ್ದು ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿಗೆ 35 ಕೋಟಿ ರೂಪಾಯಿ ಅನುದಾನ ಬಂದಿದ್ದರೂ ಕಾಮಗಾರಿ ಏಕೆ ಆರಂಭವಾಗಿಲ್ಲ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ್ರು. ಇದೇ ವೇಳೆ ಜನರಿಗೆ ಯಾವುದೇ ತೊಂದರೆಯಾಗದಂತೆ ತನ್ನ ಅವಧಿಯಲ್ಲೇ ರೈಲ್ವೆ ಓವರ್ ಬ್ರಿಡ್ಜ್ ಕಾಮಗಾರಿ ಮುಗಿಸುವುದಾಗಿ ಭರವಸೆ ಕೊಟ್ಟಿದ್ದಾರೆ.