ದಾವಣಗೆರೆ: ಡಾ. ಬಿರ್ ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚನೆ ಮಾಡಿಲ್ಲ ಅಂತಾ ಶಿಕ್ಷಣ ಇಲಾಖೆ ಹೊರ ತಂದಿದ್ದ ಕೈಪಿಡಿಯನ್ನ ವಿರೋಧಿಸಿ ನಗರದಲ್ಲಿ ಇಂದು ವಿವಿಧ ಸಂಘಟನೆಗಳ ಕಾರ್ಯಕರ್ತರು ಅರೆ ಬೆತ್ತಲೆಯಾಗಿ ಪ್ರತಿಭಟನೆ ನಡೆಸಿದರು.
ಇಂತಹ ಅಚಾತುರ್ಯಕ್ಕೆ ಕಾರಣರಾದ ಶಿಕ್ಷಣ ಸಚಿವ ಸುರೇಶ್ ಕುಮಾರ್ ರಾಜೀನಾಮೆಗೆ ರಾಜ್ಯ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಆಗ್ರಹಿದರು. ನಗರದ ಅಂಬೇಡ್ಕರ್ ಸರ್ಕಲ್, ಜಯದೇವ ಸರ್ಕಲ್‌ನಿಂದ ಎಸಿ ಕಚೇರಿಯವರಿಗೆ ಅರೆಬೆತ್ತಲೆ ಮೆರವಣಿಗೆ ನಡೆಸಿ ಅಣಕು ಪ್ರದರ್ಶನ ನಡೆಸಿದರು. ಬಳಿಕ ಎಸಿ ಕಚೇರಿ ಮುಂಭಾಗ ಪಿಬಿ ರಸ್ತೆ ಬಂದ್ ಮಾಡಿ ಶಿಕ್ಷಣ ಸಚಿವ ಹಾಗೂ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಇತ್ತೀಚೆಗಷ್ಟೇ ಸರ್ಕಾರದ ಕೈಪಿಡಿಯಲ್ಲಿ ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚನೆ ಮಾಡಿಲ್ಲ ಎಂದು ಅಂಬೇಡ್ಕರ್‌ಗೆ ಅಪಮಾನ ಮಾಡಿದ್ದರು. ಈ ಬಗ್ಗೆ ರಾಜ್ಯಾದ್ಯಂತ ಹೋರಾಟ ಸಹ ನಡೆದಿತ್ತು. ಹೋರಾಟದ ಸ್ವರೂಪದಿಂದ ಎಚ್ಚೆತ್ತ ಸರ್ಕಾರ, ಈ ಅಚಾತುರ್ಯಕ್ಕೆ ಕಾರಣವಾದ ಎನ್ಜಿಒವನ್ನ ಕಪ್ಪು ಪಟ್ಟಿಗೆ ಸೇರಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ. ಆದರೆ, ಈ ಎಲ್ಲಾ ಆಚಾತುರ್ಯಕ್ಕೆ ಬಿಜೆಪಿ ಸರ್ಕಾರ ಕೂಡ ನೇರ ಹೊಣೆಯಾಗಿದ್ದು ಕೂಡಲೇ ಸುರೇಶ್ ಕುಮಾರ್ ಅವರಿಂದ ಸಚಿವ ಸ್ಥಾನ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಅರ್ಧ ಗಂಟೆಗೂ ಹೆಚ್ಚು ಕಾಲ ಪಿಬಿ ರಸ್ತೆ ಬಂದ್ ಮಾಡಿದ್ದರಿಂದ ವಾಹನ ಸವಾರರು ಪರದಾಡಬೇಕಾಯಿತು. ರಸ್ತೆ ತೆರವುಗೊಳಿಸುವಂತೆ ಪೊಲೀಸರು ಮನವಿ ಮಾಡಿದರೂ ತೆರವುಗೊಳಿಸದಿದ್ದಕ್ಕೆ ಡಿಎಸ್ಎಸ್ ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಕೊನೆಯಲ್ಲಿ ಪೊಲೀಸರ ಮನವಿಗೆ ಸ್ಪಂದಿಸಿದ ಕಾರ್ಯಕರ್ತರು ರಸ್ತೆ ಬಂದ್ ವಾಪಸ್ ಪಡೆದು ಎಸಿಯವರಿಗೆ ಮನವಿ ಸಲ್ಲಿಸಿದರು.