ಹರಿಹರ : ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದಿಂದ ಇದೇ 29 ರಂದು ಜಿಲ್ಲಾ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂಬ ಮನವಿಯನ್ನು ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಶನ್(ಎಐ ಡಿವೈಒ)ಸಹಯೋಗದೊಂದಿಗೆ ಸರ್ಕಾರಕ್ಕೆ ತಹಶೀಲ್ದಾರ್ ಮುಖಾಂತರ ಮನವಿ ಸಲ್ಲಿಸಿದರು.
ರಾಜ್ಯದಾದ್ಯಂತ ಆಶಾ ಕಾರ್ಯಕರ್ತೆಯರು ಆರೋಗ್ಯ ಸೇವೆ ಸ್ಥಗಿತಗೊಳಿಸಿ ಹೋರಾಟ ನಡೆಸುತ್ತಿದ್ದಾರೆ. ತಮ್ಮ ಬೇಡಿಕೆಗಳಾದ ಗೌರವಧನವನ್ನು 12,000 ರೂ.ಗಳಿಗೆ ಮತ್ತು ಸೇವೆ ಸಲ್ಲಿಸುವ ಸಂದರ್ಭದಲ್ಲಿ ಸಂಪೂರ್ಣ ಸುರಕ್ಷಾ ಸಾಮಗ್ರಿಗಳನ್ನು ನೀಡಲು ಒತ್ತಾಯಿಸಿ ನಡೆಸುತ್ತಿರುವ ಹೋರಾಟದ ಭಾಗವಾಗಿ ಇದೇ ಜುಲೈ 29ರಂದು ಜಿಲ್ಲಾ ಮಟ್ಟದ ಬೃಹತ್ ಹೋರಾಟ ಕುರಿತು ಸರ್ಕಾರದ ಗಮನ ಸೆಳೆಯಲು ತಹಶೀಲ್ದಾರ್ ಕೆ ಬಿ ರಾಮಚಂದ್ರಪ್ಪನವರಿಗೆ ಮನವಿ ಸಲ್ಲಿಸಿದ್ದಾರೆ.
ರಾಜ್ಯವ್ಯಾಪಿ ಆಶಾ ಕಾರ್ಯಕರ್ತೆಯರು ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆಗಳನ್ನು ನಡೆಸಿ, ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಅವರ ಮೂಲಕ ಸರ್ಕಾರಕ್ಕೆ ಮುಖ್ಯಮಂತ್ರಿಗಳಿಗೆ, ಸಚಿವರಿಗೆ ಮತ್ತು ಶಾಸಕರಿಗೆ ತಮ್ಮ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸುತ್ತಾ ಬಂದಿದ್ದರೂ ಸಹ ಸರ್ಕಾರ ಗಮನಹರಿಸಿಲ್ಲ. ಈ ಕಾರಣಕ್ಕಾಗಿ ಇದೇ 29 ರಂದು ರಾಜ್ಯವ್ಯಾಪಿ ಜಿಲ್ಲಾಮಟ್ಟದ ಬೃಹತ್ ಹೋರಾಟವನ್ನು ಜಿಲ್ಲಾ ಕೇಂದ್ರಗಳಲ್ಲಿ ನಡೆಸಲು ಸಂಘ ತೀರ್ಮಾನಿಸಿದ ಹಿನ್ನೆಲೆ, ಮನವಿಯನ್ನು ಸಲ್ಲಿಸಲಾಗಿದೆ ಎಂದು ಆಶಾ ಕಾರ್ಯಕರ್ತೆಯರು ತಿಳಿಸಿರುತ್ತಾರೆ.