ದಾವಣಗೆರೆ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ಕಾರ್ಯಕ್ರಮ ಇರುವ ಹಿನ್ನೆಲೆ ಜಿಲ್ಲೆಯಾದ್ಯಂತ ಆ. 5 ರಂದು ಮುನ್ನೆಚ್ಚರಿಕಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 12 ಗಂಟೆಯವರೆಗೆ ಯಾವುದೇ ಸಂಭ್ರಮಾಚರಣೆ, ಪಟಾಕಿ ಸಿಡಿಸುವಂತಿಲ್ಲ. ಜನರು ಗುಂಪುಗೂಡುವಂತಿಲ್ಲ. ಯಾವುದೇ ಸಭೆ, ಸಮಾರಂಭ ನಡೆಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಆದೇಶ ಹೊರಡಿಸಿದ್ದಾರೆ.
ಫೋಟೋ, ಫ್ಲೆಕ್ಸ್, ಬ್ಯಾನರ್ ಹಾಕುವಂತಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ನೇರ ಪ್ರಸಾರಕ್ಕೆ ನಿಷೇಧ ಹೇರಲಾಗಿದೆ. ಇಂದಿನಿಂದಲೇ ಪಟಾಕಿ ಅಂಗಡಿ ಬಂದ್ ಮಾಡುವಂತೆ ಆದೇಶಿಸಲಾಗಿದೆ. ದೇವಸ್ಥಾನದಲ್ಲಿ ಹೆಚ್ಚಿನ ಜನರು ಸೇರಿ ಪೂಜೆ ನೆರವೇರಿಸುವಂತಿಲ್ಲ. ಜಿಲ್ಲೆಯು ಕೋಮುಗಲಭೆ ಇತಿಹಾಸ ಹಿನ್ನೆಲೆಯುಳ್ಳ ಕಾರಣ ಎಸ್ಪಿ ಹನುಮಂತರಾಯ ವರದಿ ನೀಡಿದ್ದಾರೆ. ಈ ವರದಿ ಆಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ. ಅಹಿತಕರ ಘಟನೆ ನಡೆಯದಂತೆ ವಿಶೇಷ ಬಂದೋಬಸ್ತ್ ಮಾಡಿಕೊಳ್ಳಲಾಗಿದೆ ಎಂದು ಡಿಸಿ ತಿಳಿಸಿದ್ದಾರೆ.
ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಎಲ್ಲಾ ಕೋಮಿನ, ಧರ್ಮದ ಜನರು ಇಲ್ಲಿ ಅಣ್ಣ-ತಮ್ಮಂದಿರ ರೀತಿ ಬಾಳುತ್ತಿದ್ದಾರೆ. ಯಾವುದೇ ಗಲಾಟೆ ಆಗುವುದಿಲ್ಲ ಎಂಬ ವಿಶ್ವಾಸ ಇದೆ. ಎಲ್ಲಾ ಧರ್ಮದ ಮುಖಂಡರ ಜೊತೆ ಹಿರಿಯ ಪೊಲೀಸ್ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಡಿಸಿ ತಿಳಿಸಿದ್ದಾರೆ.