ದಾವಣಗೆರೆ: ಇದೇ 29 ರಿಂದ ಮಾರ್ಚ್ 20ರವರೆಗೆ ನಗರದಲ್ಲಿ ನಡೆಯಲಿರುವ ನಗರ ದೇವತೆ ದುರ್ಗಾಂಬಿಕಾ ದೇವಿ ಹಾಗೂ ವಿನೋಬ ನಗರದ ಶ್ರೀ ಚೌಡೇಶ್ವರಿ ದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿಯನ್ನು ನಿಷೇಧಿಸಲಾಗಿದೆ.
ವಿನೋಬನಗರದ ಶ್ರೀಚೌಡೇಶ್ವರಿ ದೇವಿ ಜಾತ್ರೆ ಇದ್ದು, ಈ ಸಂದರ್ಭದಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ಸಹ ಜರುಗಲಿವೆ. ಈ ಜಾತ್ರೆಗೆ ಲಕ್ಷಾಂತರ ಭಕ್ತಾಧಿಗಳು ಆಗಮಿಸಿ ದೇವಸ್ಥಾನದ ಅಥವಾ ಜಾತ್ರಾ ಆವರಣದ ಪ್ರದೇಶದೊಳಗೆ ದೇವರ ಹೆಸರಿನಲ್ಲಿ ಪ್ರಾಣಿಗಳನ್ನು ಬಲಿ ನೀಡುವುದು ಕಾನೂನಿಗೆ ವಿರುದ್ಧವಾಗಿದ್ದು, ಪ್ರಾಣಿಬಲಿ ಕೊಡುವ ಪದ್ಧತಿಯು ಕರ್ನಾಟಕ ಪ್ರಾಣಿ ಬಲಿ ನಿಷೇಧ ಕಾಯ್ದೆ ಪ್ರಕಾರ ಅಪರಾಧ ಹಾಗೂ ಶಿಕ್ಷಾರ್ಹವಾಗಿದೆ. ಈ ಪದ್ಧತಿಯು ಅತ್ಯಂತ ಕ್ರೂರ ಹಾಗೂ ಅವೈಜ್ಞಾನಿಕವಾಗಿದ್ದು, ಸಾಂಕ್ರಾಮಿಕ ರೋಗಗಳು ಹರಡುವುದಕ್ಕೆ ಕಾರಣವಾಗುವುದರಿಂದ ದೇವಸ್ಥಾನಗಳ ಸುತ್ತಮುತ್ತಲ ಪ್ರದೇಶದಲ್ಲಿ ಈ ಜಾತ್ರಾ ದಿನಗಳಂದು ಯಾವುದೇ ರೀತಿಯ ಪ್ರಾಣಿ ಬಲಿಯನ್ನು ನಡೆಸಲು ಅವಕಾಶ ನೀಡಬಾರದೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಆದೇಶಿಸಿದ್ದಾರೆ.
ದೇವಸ್ಥಾನದ ಹತ್ತಿರ ಅಥವಾ ಜಾತ್ರಾ ಆವರಣದ ಪ್ರದೇಶದೊಳಗೆ ಭಕ್ತಾಧಿಗಳು, ಸಾರ್ವಜನಿಕರು ದೇವರ ಹೆಸರಿನಲ್ಲಿ ಯಾವುದೇ ಪ್ರಾಣಿಬಲಿ ನೀಡುವುದು, ಕುರಿ, ಕೋಳಿ, ಆಡು ಇತ್ಯಾದಿ ಪ್ರಾಣಿಗಳನ್ನು ತೆಗೆದುಕೊಂಡು ಬರುವುದು ಮತ್ತು ಮಾರಕಾಸ್ತ್ರಗಳನ್ನು ತರುವುದನ್ನು ನಿಷೇಧಿಲಾಗಿದೆ ಎಂದು ಅವರು ತಿಳಿಸಿದ್ದಾರೆ.