ದಾವಣಗೆರೆ: ರೈತರ ಬೆಳೆಯ ಬೆಲೆಯನ್ನು ಮುಂಚಿತವಾಗಿಯೇ ಆಡಳಿತ ಸರ್ಕಾರ ನಿಗದಿ ಪಡಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
ಹೊನ್ನಾಳಿ ತಾಲೂಕಿನ ಹಿರೇಕಲ್ಮಠದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕೃಷಿ ಸಮ್ಮೇಳನದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆಹಾರ ಸ್ವಾವಲಂಬನೆ ಜತೆ, ಕೃಷಿ ಕ್ಷೇತ್ರದಲ್ಲಿ ಹೊಸ ಬೆಳವಣಿಗೆಯ ಫಲ ಕೃಷಿಕರಿಗೆ ತಲುಪಬೇಕು. ಒಂದು ಕಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಶೇ. 80ರಷ್ಟು ಜನ ವಾಸಿಸುತ್ತಿದ್ದರು. ಈಗ ಅದು ಶೇ.62ಕ್ಕೆ ಕುಸಿದಿದೆ. ಯುವಕರು ಕೃಷಿಯಿಂದ ಹಿಂದೆ ಸರಿಯುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿ ತೆಗೆಯಬೇಕು. ಹಸಿರು ಕ್ರಾಂತಿ ನಂತರ ದೇಶ ಆಹಾರ ಸ್ವಾವಲಂಬನೆ ಹೊಂದಿದೆ. ಚೀನಾ ನಂತರ ಭಾರತ ಅತಿ ಹೆಚ್ಚು ಜನಸಂಖ್ಯೆ ಹೊಂದಿದ ದೇಶ. ಹಾಲು ಉತ್ಪಾದನೆ, ಮೀನುಗಾರಿಕೆ, ಪಶು ಸಂಗೋಪನೆಯನ್ನು ಕೃಷಿಕರು ಅಳವಡಿಸಿಕೊಳ್ಳಬೇಕು. ಬಹು ಬೆಳೆ ಪದ್ಧತಿಯಿಂದ ಆದಾಯ ಹೆಚ್ಚುತ್ತದೆ ಎಂದರು.
ರಾಜ್ಯದಲ್ಲಿ 55 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿತ್ತು. ಪ್ರೋತ್ಸಾಹ ಧನ ಘೋಷಣೆ ನಂತರ 82 ಲಕ್ಷ ಲೀಟರ್ ಏರಿಕೆಯಾಗಿದೆ ಎಂದು ತಿಳಿಸಿದರು.
ನಾನು ರೈತರನ ಮಗ, ಕಾನೂನಿನ ಓದಿಗೆ ಸೇರಿದ ಮೇಲೆ ಬೇಸಾಯ ಕೈಬಿಟ್ಟೆ. ನನಗೆ ಕೃಷಿ ಬಗ್ಗೆ ಅನುಭವವಿದೆ. ರೈತರಿಗೆ ಅನುಕೂಲವಾಗಲಿ ಎಂದು ಕೃಷಿ ಮೇಳ ಆಯೋಜಿಸಿದ್ದಾರೆ. ಕೃಷಿ ವಿವಿ ಸೇರಿದಂತೆ ಅನೇಕ ಮಠಗಳಲ್ಲಿ ಕೃಷಿ ಮೇಳ ನಡೆಯುತ್ತಿವೆ ಎಂದು ಹೇಳಿದರು.