ದಾವಣಗೆರೆ: ಬುಧವಾರದಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರುತ್ತಿದೆ. ಈ ವೇಳೆ ದಾವಣಗೆರೆಯ ಪಿ.ಜಿ ಬಡಾವಣೆಯ ಶ್ರೀರಾಮಮಂದಿರದ ಬಳಿ ರಾಮ ಪ್ರತಿಮೆಗೆ ಅಭಿಷೇಕ ನೆರವೇರಿಸಲು ಸಿದ್ಧತೆ ನಡೆಸಲಾಗಿದೆ.
ಸುಮಾರು 32 ಅಡಿ ಎತ್ತರದ ಶ್ರೀರಾಮನ ಮೂರ್ತಿಯ ಕಟೌಟ್ ನಿಲ್ಲಿಸಲಾಗಿದೆ. ಆ.5ರಂದು ಅಯೋಧ್ಯೆಯಲ್ಲಿ ಯಶಸ್ವಿಯಾಗಿ ಕಾರ್ಯಕ್ರಮ ನೆರವೇರಬೇಕು ಎಂದು ಪ್ರಾರ್ಥಿಸಿ ಶ್ರೀರಾಮನ ಮೂರ್ತಿಗೆ ಶ್ರೀರಾಮ ಭಕ್ತರು ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಅಭಿಷೇಕ ನೆರವೇರಿಸಲಿದ್ದಾರೆ.
ಜಗಜ್ಯೋತಿ ಬಸವಣ್ಣ, ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್, ಸಂಗೊಳ್ಳಿ ರಾಯಣ್ಣ, ವೀರಮದಕರಿ ನಾಯಕ, ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಮಾಲಾರ್ಪಣೆ ನಡೆಯಲಿದೆ. ಬಳಿಕ ಶಿವಾಜಿ ವೃತ್ತದಲ್ಲಿರುವ ರಾಮಮೂರ್ತಿಗೆ ಪೂಜೆ ಸಲ್ಲಿಸಿ ಸಿಹಿ ವಿತರಿಸಲಾಗುವುದು ಎಂದು ಜಿಲ್ಲಾ ಬಿಜೆಪಿ ಘಟಕದ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ತಿಳಿಸಿದ್ದಾರೆ.
1990ರ ಅ.6ರಂದು ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಒತ್ತಾಯಿಸುವ ಸಲುವಾಗಿ ದಾವಣಗೆರೆಗೆ ಶ್ರೀರಾಮ ಜ್ಯೋತಿ ರಥಯಾತ್ರೆ ಬಂದಿತ್ತು. ಆಗ ಶಿವಾಜಿ ವೃತ್ತದಲ್ಲಿ ನಡೆದ ಗೋಲಿಬಾರ್ನಲ್ಲಿ ಚಂದ್ರಶೇಖರ ರಾವ್ ಶಿಂಧೆ, ಶಿವಾಜಿರಾವ್ ಘಾಟ್ಗೆ, ಆರ್. ಜಿ. ಶ್ರೀನಿವಾಸರಾವ್, ರಾಮಕೃಷ್ಣ ಸಾವಳಗಿ, ಎಲೆಬೇತೂರು ದುರುಗಪ್ಪ, ಹಮಾಲಿ ಚಿನ್ನಪ್ಪ, ಅಂಬರೀಶ್, ಹೆಚ್. ನಾಗರಾಜ್ ಮೃತಪಟ್ಟಿದ್ದು, ಅವರನ್ನು ಸ್ಮರಿಸಿಕೊಳ್ಳುವ ಸಲುವಾಗಿ ರಾಮನಮೂರ್ತಿಯ ಕೆಳಗೆ ಇವರ ಭಾವಚಿತ್ರ ಇಡಲಾಗಿದೆ.
ಕೊರೊನಾ ಹಿನ್ನೆಲೆಯಲ್ಲಿ ಅಚ್ಚುಕಟ್ಟಾಗಿ ಸಾಮಾಜಿಕ ಅಂತರ ಕಾಪಾಡಿಕೊಂಡು, ಮಾಸ್ಕ್ ಧರಿಸಿ ಶ್ರೀರಾಮನ ಮೂರ್ತಿಗೆ ಅಭಿಷೇಕವನ್ನು ನೆರವೇರಿಸಲಾಗುವುದು. ಯಾವುದೇ ಧರ್ಮಕ್ಕೆ ಧಕ್ಕೆಯಾಗುವಂತಹ ಘೋಷಣೆಯನ್ನು ಯಾರೂ ಕೂಗಬಾರದು ಎಂಬ ಮನವಿಯನ್ನು ಈಗಾಗಲೇ ಮಾಡಲಾಗಿದೆ ಎಂದು ಜಾಧವ್ ಹೇಳಿದರು.