ದಾವಣಗೆರೆ: ಕೊರೊನಾ ಸೋಂಕು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈದ್ಗಾ ಮೈದಾನಗಳಲ್ಲಿ ಈ ಬಾರಿ ಪ್ರಾರ್ಥನೆ ಮಾಡುವಂತಿಲ್ಲ. ತೆರೆದ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಒಟ್ಟುಗೂಡುವುದನ್ನು ನಿಷೇಧಿಸಲಾಗಿದೆ. ಮಸೀದಿಗಳಲ್ಲಿ ಮಾತ್ರ ಪ್ರಾರ್ಥನೆ ಮಾಡಲು ಅವಕಾಶವಿದೆ ಎಂದು ಎಸ್ಪಿ ಹನುಮಂತರಾಯ ಹೇಳಿದ್ದಾರೆ.
ಬಕ್ರೀದ್ ಆಚರಣೆ ಹಿನ್ನೆಲೆಯಲ್ಲಿ ಎಸ್ಪಿ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ನಾಗರಿಕ ಶಾಂತಿ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು, ಬಕ್ರೀದ್ ಹಬ್ಬ ಹಿಂದಿನ ವರ್ಷ ಶಾಂತಿಯುತವಾಗಿ ನಡೆದಿದೆ. ಈ ಬಾರಿಯೂ ಅದೇ ರೀತಿ ಆಚರಿಸಲು ಎಲ್ಲಾ ಸಮುದಾಯದವರು ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಈದ್ಗಾ, ದರ್ಗಾ, ಮಸೀದಿಗಳಲ್ಲಿ 50 ಜನ ಮೀರದಂತೆ, ಮಸೀದಿ ಸಣ್ಣದಿದ್ದರೆ 20 ಜನ ಪ್ರಾರ್ಥನೆ ಮಾಡಬೇಕು. ಒಂದೊಮ್ಮೆ ಹೆಚ್ಚು ಜನರಿದ್ದರೆ ಸರದಿಯಂತೆ ಪ್ರಾರ್ಥನೆ ಮಾಡಬೇಕು. ಪ್ರಾರ್ಥನೆ ಮುಗಿದ ಮೇಲೆ ಸ್ಥಳವನ್ನು ಶುಚಿಗೊಳಿಸಬೇಕು. ಮಾಸ್ಕ್ ಬಳಕೆ ಕಡ್ಡಾಯ, 60 ವರ್ಷಕ್ಕಿಂತ ಮೇಲ್ಪಟ್ಟವರು ಹಾಗೂ 10 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮನೆಯಲ್ಲಿಯೇ ಪ್ರಾರ್ಥನೆ ಮಾಡಬೇಕು. 6 ಅಡಿ ಅಂತರ ಕಾಯ್ದುಕೊಂಡು ಪ್ರಾರ್ಥನೆ ಮಾಡಬೇಕು. ಮಸೀದಿ ಪ್ರವೇಶಿಸುವ ಮೊದಲು ದೇಹದ ತಾಪಮಾನ ತಪಾಸಣೆ ಮಾಡಬೇಕು ಎಂದು ಸೂಚಿಸಿದರು.
ಅಕ್ರಮ ಗೋ ಸಾಗಾಟ ತಡೆಗೆ 20 ಚೆಕ್ ಪೋಸ್ಟ್
ಅಕ್ರಮ ಗೋ ಸಾಗಾಟ ತಡೆಯಲು ಈ ಬಾರಿ ಸರ್ಕಾರದ ಸೂಚನೆ ಬಹಳಷ್ಟು ಕಟ್ಟುನಿಟ್ಟಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ 20 ಚೆಕ್ ಪೋಸ್ಟ್ ಮಾಡಲಾಗುತ್ತಿದೆ. 2018ರಲ್ಲಿ 2 ಪ್ರಕರಣ, 2019ರಲ್ಲಿ ಹರಿಹರದಲ್ಲಿ 1 ಪ್ರಕರಣ ಪತ್ತೆಯಾಗಿದ್ವು. ಈ ವರ್ಷ ಇಂತಹ ಯಾವುದೇ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಒಂಟೆ ಮಾಂಸ ಕೂಡ ಸರ್ಕಾರ ನಿಷೇಧಿಸಿದೆ. ಹಾಗಾಗಿ ಯಾರೂ ಒಂಟೆ ಮಾಂಸ ಬಳಸಬಾರದು ಎಂದರು.