ದಾವಣಗೆರೆ: ತಮ್ಮ ಸಮುದಾಯದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಬ್ರಹ್ಮರ್ಷಿ ನಾರಾಯಣ ಗುರು ಶಕ್ತಿ ಪೀಠದ ಪ್ರಣವಾನಂದ ಶ್ರೀಯವರು ಪಾದಯಾತ್ರೆ ಮಾಡುವ ವೇಳೆ ಅವರ ಆರೋಗ್ಯದಲ್ಲಿ ಏರುಪೇರಾಗಿದೆ. ಬಳಿಕ ಸರ್ಕಾರಿ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಮಹಾದೇವನಹಳ್ಳಿಯ ಬಳಿ ಪಾದಯಾತ್ರೆ ಸಾಗಿ ಬರುತ್ತಿದ್ದಂತೆ ಶ್ರೀಗಳ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ.
ಈಡಿಗ ಸಮಾಜದ ವಿವಿಧ ಬೇಡಿಕೆ ಪೂರೈಕೆಗೆ ಆಗ್ರಹಿಸಿ ಮಂಗಳೂರನಿಂದ ಬೆಂಗಳೂರಿಗೆ ಪಾದಯಾತ್ರೆಯನ್ನು ಪ್ರಣವಾನಂದ ಸ್ವಾಮೀಜಿಯವರು ಆರಂಭಿಸಿದ್ದಾರೆ. ನಿರಂತರವಾಗಿ ಪಾದಯಾತ್ರೆ ಮಾಡಿದ್ದರಿಂದ ಶ್ರೀಗಳು ಸುಸ್ತಾಗಿ ಆರೋಗ್ಯ ಹದೆಗೆಡಲು ಪ್ರಮುಖ ಕಾರಣವಾಗಿದ್ದು, ಕೆಲ ಹೊತ್ತು ಅಸ್ವಸ್ಥರಾದರು. ಇನ್ನು, ಚನ್ನಗಿರಿ ತಾಲೂಕಿನ ಮಾವಿನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯರು ಪ್ರಣವಾನಂದ ಶ್ರೀಗೆ ಚಿಕಿತ್ಸೆ ನೀಡಿದ್ದು, ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ. ಅಗತ್ಯವಿದ್ದರೇ ಬೆಳಗ್ಗೆ ಹೆಚ್ಚಿನ ಚಿಕಿತ್ಸೆ ಕುರಿತು ಮಾಹಿತಿ ನೀಡುತ್ತೇವೆ ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು, ಅಸ್ತವ್ಯಸ್ತರಾದ ಪ್ರಣವಾನಂದ ಶ್ರೀಗಳು ಪ್ರತಿಕ್ರಿಯಿಸಿ, ನನಗೆ ಏನೂ ಆಗಿಲ್ಲ ಆರೋಗ್ಯವಾಗಿದ್ದೇನೆ ಎಂದು ಭಕ್ತರಿಗೆ ಸಂದೇಶ ರವಾನಿಸಿದ್ದಾರೆ.
40 ದಿನಗಳ ಪಾದಯಾತ್ರೆ: ವಿವಿಧ ಸಮುದಾಯದವರು ತಮ್ಮ ಮೀಸಲಾತಿಗೆ ಹಲವು ವರ್ಷಗಳಿಂದ ಬೇಡಿಕೆ ಇಟ್ಟುಕೊಂಡೇ ಬಂದಿದ್ದಾರೆ. ಆದರೆ ಈಗ ಸರ್ಕಾರ ಚುನಾವಣಾ ಕಾರಣದಿಂದ ಏನೋ ಸ್ವಲ್ಪ ಮಟ್ಟಿಗೆ ಮೀಸಲಾತಿ ನೀಡಿ ಜನರ ಪ್ರತಿಭಟನೆಯನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದೆ. ಆದರೆ ಇದೇ ಮೀಸಲಾತಿಗೆ ಆಗ್ರಹಿಸಿ ಬಿಲ್ಲವ, ಈಡಿಗ, ನಾಮಧಾರಿ ಸೇರಿದಂತೆ ಸಮಾಜದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮಂಗಳೂರಿನಿಂದ ಬೆಂಗಳೂರಿನವರೆಗೆ ಪಾದಯಾತ್ರೆಯನ್ನು ಪ್ರಣವಾನಂದ ಸ್ವಾಮೀಜಿ ನೇತ್ರತ್ವದಲ್ಲಿ ಹಮ್ಮಿಕೊಂಡಿದ್ದರು.
ಈ ಪಾದಯಾತ್ರೆ ಮೊದಲು ಕುದ್ರೋಳಿ ಶ್ರೀಕ್ಷೇತ್ರದಲ್ಲಿ ಆರಂಭಿಸಿದ್ದರು. ಇವರ ಪಾದಯಾತ್ರೆಯು ಮಂಗಳೂರಿನಿಂದ ಶುರುವಾಗಿದ್ದು ಉಡುಪಿ, ಬ್ರಹ್ಮಾವರ, ಮಾಸ್ತಿಕಟ್ಟೆ ಹೊಸನಗರವಾಗಿ ತೀರ್ಥಹಳ್ಳಿ, ಸಾಗರ, ಶಿವಮೊಗ್ಗ, ಚೆನ್ನಗಿರಿ, ಶಿಕಾರಿಪುರ, ದಾವಣಗೆರೆ, ಚಿತ್ರದುರ್ಗ, ತುಮಕೂರು ಮಾರ್ಗವಾಗಿ ಬೆಂಗಳೂರು ತಲುಪುವ ಹಾಗೆ ಯೋಜನೆ ಮಾಡಿದ್ದು, ಒಟ್ಟು ಈ ಪಾದಯಾತ್ರೆ 658 ಕಿ.ಮಿ. ಕ್ಕಿಂತಲೂ ಜಾಸ್ತಿ ಕ್ರಮಿಸಲಿದೆ. ಈಗ ಪಾದಯಾತ್ರೆಯು ದಾವಣಗೆರೆ ತಲುಪಿದ್ದು, ನಿರಂತರ ಯಾತ್ರೆಯಿಂದ ಸ್ವಾಮೀಜಿಯವರ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಏರು ಪೇರಾಗಿದ್ದು ಸದ್ಯ ಚಿಕಿತ್ಸೆ ನಂತರ ಚೇತರಿಸಿಕೊಂಡಿದ್ದಾರೆ.
ಇನ್ನು, ಈ ಪಾದಯಾತ್ರೆ ಅಲ್ಲದೆ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಸರ್ಕಾರದ ವಿರುದ್ಧ ಇನ್ನೂ ಎರಡು ಪಾದಯಾತ್ರೆ ಹಮ್ಮಿಕೊಳ್ಳುತ್ತಾರಂತೆ. ಹೀಗಂತ ಪಾದಯಾತ್ರೆ ಆರಂಭಕ್ಕೂ ಮುನ್ನ ಸಮಾರಂಭ ಕಾರ್ಯಕ್ರಮದಲ್ಲಿ ಮಾತನಾಡಿ ಹೇಳಿದ್ದರು. ರಾಜ್ಯ ಸರ್ಕಾರವು ನಾರಾಯಣ ಗುರು ಅಭಿವೃದ್ಧಿ ನಿಗಮದ ಘೋಷಣೆಯನ್ನು ಸಮುದಾಯದವರ ಆಗ್ರಹದ ನಡುವೆಯು ಮಾಡಿದ್ದರು. ಒಂದು ವೇಳೆ ಈ ನಿಗಮವು ಬಿಲ್ಲವ ಪರ ಕೆಲಸ ಮಾಡದೇ ಇದ್ದರೆ ಈ ನಿಗಮವನ್ನು ನಿಲ್ಲಿಸುವ ಪರವಾಗಿ ಇನ್ನೊಂದು ಪಾದಯಾತ್ರೆ ಮಾಡಲಾಗುತ್ತದೆ ಎಂದಿದ್ದಾರೆ. ಇದೆಲ್ಲದರ ನಡುವೆ ಮೊದಲ ಪಾದಯಾತ್ರೆ ಯಶಸ್ವಿಯಾಗಿ ನಡೆಯುತ್ತಿದೆ.
ಇದನ್ನೂ ಓದಿ: ಬಿಲ್ಲವ, ಈಡಿಗ, ನಾಮಧಾರಿಗಳ ವಿವಿಧ ಬೇಡಿಕೆ ಈಡೇರಿಕೆಗಾಗಿ ಪಾದಯಾತ್ರೆ ಆರಂಭ