ದಾವಣಗೆರೆ: ರಾಜಕೀಯ ಲಾಭದ ಹಿನ್ನೆಲೆ ಪಿಎಫ್‌ಐ ಹಾಗೂ ಎಸ್‌ಡಿಪಿಐಗೆ ಬಿಜೆಪಿ ಪರೋಕ್ಷವಾಗಿ ಬೆಂಬಲಿಸುತ್ತಿರುವುದು ಎದ್ದು ಕಾಣಿಸುತ್ತಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಪ್ರತಿಪಕ್ಷದಲ್ಲಿದ್ದಾಗ ಪಿಎಫ್‌ಐ ಹಾಗೂ ಎಸ್‌ಡಿಪಿಐ ಬ್ಯಾನ್‌ಗೆ ಆಗ್ರಹಿಸಿದ್ದರು. ಆದರೆ ಇದೀಗ ಅವರು ಅಧಿಕಾರಿದಲ್ಲಿದ್ದರೂ ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆಗಳನ್ನು ನಿಷೇಧಿಸಿಲ್ಲ. ಅವರ ಮೇಲೆ ನಿಗಾ ಇಡುವುದಾಗಿ ಸರ್ಕಾರ ಹೇಳಿಕೆ ನೀಡುತ್ತೆ, ಅವರು ನಿಜವಾಗಿಯೂ ನಿಗಾ ಇಟ್ಟಿದ್ದರೆ, ಹರ್ಷ ಹಾಗೂ ಪರೇಶ್ ಮೇಸ್ತಿ ಹತ್ಯೆ ಆಗುತ್ತಿರಲಿಲ್ಲ ಎಂದು ಕಿಡಿಕಾರಿದರು.
ರಾಜಕೀಯ ಲಾಭದ ಹಿನ್ನೆಲೆ ಪಿಎಫ್‌ಐ ಹಾಗೂ ಎಸ್‌ಡಿಪಿಐಗೆ ಬಿಜೆಪಿ ಪರೋಕ್ಷವಾಗಿ ಬೆಂಬಲಿಸುತ್ತಿದ್ದು, ಇದೇ ಕಾರಣಕ್ಕೆ ಅವುಗಳನ್ನು ಬ್ಯಾನ್ ಮಾಡಲು ಬಿಜೆಪಿ ಸರ್ಕಾರ ನಿರ್ಧಾರ ಮಾಡುತ್ತಿಲ್ಲ. ಇಂಥ ದುಷ್ಟ ಶಕ್ತಿಗಳನ್ನು ಬೆಳೆಸಿದರೆ ದೇಶಕ್ಕೆ ಹಾಗೂ ಹಿಂದೂ ಸಮಾಜಕ್ಕೆ ಕಂಟಕವಾಗಲಿದೆ. ಕೂಡಲೇ ಪಿಎಫ್‌ಐ, ಎಸ್‌ಡಿಪಿಐ ಹಾಗೂ ಸಿಎಫ್‌ಐ ಸಂಘಟನೆ ಬ್ಯಾನ್ ಮಾಡಬೇಕು. ತಪ್ಪಿದರೆ ಶ್ರೀರಾಮ ಸೇನಾ ಉಗ್ರ ಹೋರಾಟ ನಡೆಸುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.
ಹಿಂದೂ ಹರ್ಷನ ಕೊಲೆ ಯಾವುದೇ ಸ್ವಾರ್ಥಕ್ಕೆ ಆಗಿಲ್ಲ : ಹಿಂದೂ ಕಾರ್ಯಕರ್ತ ಹರ್ಷನ ಕೊಲೆ ಯಾವುದೇ ಸ್ವಾರ್ಥಕ್ಕೆ ಆಗಿಲ್ಲ, ಅದು ಹಿಂದೂ ಹಾಗೂ ಹಿಂದೂತ್ವದ ಹಿನ್ನೆಲೆ ಆಗಿದೆ. ಹಿಂದೂ ಧರ್ಮದ ಮೇಲೆ ಆಘಾತ ಮಾಡುತ್ತಿರುವುದು ಕಾಣಿಸುತ್ತಿದೆ ಎಂದು ಹೇಳಿದರು.