ದಾವಣಗೆರೆ: ಬಿಜೆಪಿಗೆ ಒಂದು ಕೋಮಿನವರು ಕಂಠಕವಾಗಲಿದ್ದಾರೆ ಎಂದು ಶ್ರೀರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಿಎಫ್ಐ, ಎಸ್ಡಿಪಿಐ ಸಂಘಟನೆಗಳನ್ನು ನಿಷೇಧಿಸಬೇಕು. ಈ ಬಗ್ಗೆ ಹಲವು ವರ್ಷಗಳಿಂದ ನಿರಂತರವಾಗಿ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಬಿಜೆಪಿಗರು ಪ್ರತಿಪಕ್ಷದಲ್ಲಿದ್ದಾಗ ಮಾತ್ರ ಎಸ್ ಡಿ ಪಿ ಐ ಬ್ಯಾನ್ ಮಾಡಬೇಕು ಎಂದು ಹೇಳುತ್ತಾರೆ. ಅದರೆ, ಈಗ ಅವರೇ ಅಧಿಕಾರಕ್ಕೆ ಬಂದಿದ್ದರೂ ಈ ಬಗ್ಗೆ ಚಕಾರ ಎತ್ತುತ್ತಿಲ್ಲ. ವೋಟಿಗಾಗಿ ಬಿಜೆಪಿ ಈ ರೀತಿ ಮಾಡುತ್ತಿದೆ ಎಂದು ಹರಿಹಾಯ್ದರು.
ಏನ್ ಮಾಡ್ತಿದ್ದೀರಿ ಪೊಲೀಸ್ರೇ..? ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗಟ್ಟಿಯಲ್ಲಿ ಮಹಿಳೆ ಮೇಲೆ ಅತ್ಯಾಚಾರ ಆಗಿದೆ. ಆದರೆ, ಪೊಲೀಸರು ಆ ಪ್ರಕರಣವನ್ನು ಮುಚ್ಚಿಹಾಕುವ ಕೆಲಸ ಮಾಡುತ್ತಿದ್ದಾರೆ. ಒಂದು ಕೋಮಿನ 60 ವರ್ಷದ ವ್ಯಕ್ತಿಯನ್ನು ಬಂಧಿಸಿದ್ದಾರೆ, ಆತನ ಜೊತೆಗಿದ್ದವರನ್ನು ಬಂಧಿಸದೆ, ಕೇವಲ ಕೊಲೆ ಕೇಸ್ ಹಾಕಿದ್ದಾರೆ. ಕೂಡಲೇ ಅತ್ಯಾಚಾರಿಗಳನ್ನು ಬಂಧಿಸಬೇಕು, ಮಹಿಳೆ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು ಎಂದು ಮುತಾಲಿಕ್ ಒತ್ತಾಯಿಸಿದರು.
ಇದನ್ನೂ ಓದಿ: ಕಾಂಗ್ರೆಸ್ಗೆ ವಿದೇಶಾಂಗ ನೀತಿಯೇ ಗೊತ್ತಿಲ್ಲ: ಸಂಸದ ಪ್ರತಾಪ್ ಸಿಂಹ ವಾಗ್ದಾಳಿ
ನವೀನ್ ಕೊಂದಿದ್ದು ಸರ್ಕಾರ! ನವೀನ್ನನ್ನು ಕೊಂದಿದ್ದು ಈ ಸರ್ಕಾರ ಹಾಗೂ ಮೆಡಿಕಲ್ ಕಾಲೇಜ್ಗಳು. ರಾಜ್ಯದಲ್ಲಿ ನೀಟ್ ಪರೀಕ್ಷಾ ಪದ್ಧತಿಯನ್ನು ಸರ್ಕಾರ ಸರಿಪಡಿಸಬೇಕು. ನಮ್ಮ ರಾಜ್ಯದ ವಿದ್ಯಾರ್ಥಿಗಳಿಗೆ ಮಾತ್ರ ಸೀಟ್ ನೀಡಬೇಕು. ಆದರೆ, ಈಗ ಬೇರೆ ರಾಜ್ಯದ ವಿದ್ಯಾರ್ಥಿಗಳಿಗೆ ಸೀಟ್ ಸಿಗುತ್ತಿದೆ. ರಾಜ್ಯದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜುಗಳೇ ಕಮ್ಮಿ, ರಾಜಕಾರಣಿಗಳ ಸ್ವಾಮೀಜಿಗಳ ಮೆಡಿಕಲ್ ಕಾಲೇಜುಗಳೇ ಹೆಚ್ಚು. ಮೆಡಿಕಲ್ ಕಾಲೇಜುಗಳು ರಾಜಕಾರಣಿಗಳಿಗೆ ಎಟಿಎಂ ಆಗಿವೆ ಎಂದು ಹರಿಹಾಯ್ದರು.