ದಾವಣಗೆರೆ: ತಾಲೂಕಿನ ತೋಳಹುಣಸೆಯ ದಾವಣಗೆರೆ ವಿವಿ ಸಮೀಪದಲ್ಲಿ ಬ್ಯಾರಿಕೇಡ್ ದಾಟಿ ಮತ ಕೇಂದ್ರದ ಒಳಬರಲು ಮುಂದಾದ ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯರನ್ನು ಪೊಲೀಸರು ತಡೆಹಿಡಿದ ಘಟನೆ ನಡೆಯಿತು.
ರೇಣುಕಾಚಾರ್ಯ ಮತ್ತು ಬೆಂಬಲಿಗರು ಜೀಪ್ ಚಲಾಯಿಸಿಕೊಂಡು ಬ್ಯಾರಿಕೇಡ್ ಬಳಿ ಬರುತ್ತಿದ್ದಂತೆ ಪೊಲೀಸರು ತಡೆದರು. ರೇಣುಕಾಚಾರ್ಯರ ಜೊತೆಗೆ 4-5 ಕಾರುಗಳಲ್ಲಿ
ಬಿಜೆಪಿ ಮುಖಂಡರು ಮತ್ತು ಬೆಂಬಲಿಗರು ಬಂದರು. ಈ ವೇಳೆ ನಿಷೇಧಾಜ್ಞೆ ಇರುವ ಕಾರಣ ಮತ್ತು ಪಾಸ್ ತೋರಿಸಿದರೆ ಮಾತ್ರ ಒಳಬಿಡುತ್ತೇವೆ ಎಂದು ಪೊಲೀಸರು ಹೇಳಿದರು. ಆದರೆ,ಇದಕ್ಕೆ ಒಪ್ಪದಿದ್ದಾಗ ಪೊಲೀಸ್ ಸಿಬ್ಬಂದಿ ಜೊತೆ ರೇಣುಕಾಚಾರ್ಯ ಮಾತಿನ ಚಕಮಕಿ ನಡೆಸಿದರು. ಈ ವೇಳೆ ಅಧಿಕಾರಿಗಳಿಗೆ ಫೋನ್ ಮೂಲಕ ಮಾತನಾಡುವ ಪ್ರಯತ್ನವನ್ನೂ ಮಾಡಿದರು. ಪೊಲೀಸರು ಮಾತ್ರ ಪಾಸ್ ತೋರಿಸಿದರೆ ಮಾತ್ರ ಒಳ ಬಿಡುತ್ತೇವೆ. ಜಿಲ್ಲಾಧಿಕಾರಿ ಅವರಿಂದ ನೀವು ಅನುಮತಿ ಪಡೆದರೆ ನಿಮ್ಮನ್ನು ಮತ್ತು ಜೀಪನ್ನು ಒಳ ಬಿಡುತ್ತೇವೆ. ಇಲ್ಲದಿದ್ದರೆ ನಾವು ಕಾನೂನು ಪಾಲನೆ ಮಾಡಲೇಬೇಕಾಗುತ್ತದೆ. ಹಾಗಾಗಿ, ನೀವು ಒಳ ಹೋಗುವ ಪ್ರಯತ್ನ ಮಾಡಬೇಡಿ. ಸಮಸ್ಯೆ ಬಿಗಡಾಯಿಸುವಂತೆ ಮಾಡಬೇಡಿ ಎಂದು ರೇಣುಕಾಚಾರ್ಯರ ಬಳಿ ವಿನಂತಿಸಿದರು ಎನ್ನಲಾಗಿದೆ.
ಈ ವೇಳೆ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಉದೇಶ್, ರೇಣುಕಾಚಾರ್ಯರಿಗೆ ಪರಿಸ್ಥಿತಿಯನ್ನು ವಿವರಿಸಿ ಒಳಬಿಡಲು ಸಾಧ್ಯವಿಲ್ಲ ಎಂದು ಸಮಾಧಾನಪಡಿಸಲು ಯತ್ನಿಸಿದರು. 144 ಸೆಕ್ಷನ್ ಜಾರಿಯಲ್ಲಿರುವಾಗ ಯಾರನ್ನೂ ಬ್ಯಾರಿಕೇಡ್ ದಾಟಿ ಬರಲು ಬಿಡುವುದಿಲ್ಲ. ಪಾಸ್ ಹೊಂದಿದವರಿಗಷ್ಟೇ ಪ್ರವೇಶ ಎಂದು ತಿಳಿ ಹೇಳಿದರು. ಬಳಿಕ ರೇಣುಕಾಚಾರ್ಯ ಸಮಾಧಾನಗೊಂಡು, ಬಿಜೆಪಿ ಕಾರ್ಯಕರ್ತರು ಮತ್ತು ಮುಖಂಡರಿಗೆ 'ಬ್ಯಾಡ ಬಿಡ್ರಪ್ಪಾ, ಪೊಲೀಸರು ಅವ್ರ ಕೆಲಸ ಮಾಡಲಿ' ಎಂದು ಹೇಳಿದಾಗ ಪರಿಸ್ಥಿತಿ ತಿಳಿಯಾಯಿತು. ಇನ್ನು ಬಿಜೆಪಿ ಮುಖಂಡರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಂ.ಸಿದ್ದೇಶ್ವರ್ ಜಯ ಗಳಿಸಿದ ಹಿನ್ನೆಲೆಯಲ್ಲಿ ರೇಣುಕಾಚಾರ್ಯರನ್ನು ಹೊತ್ತುಕೊಂಡು ಕುಣಿದು ಕುಪ್ಪಳಿಸಿದರು.