ದಾವಣಗೆರೆ: ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದ ಲೇಡಿ ಸಿಂಗಂ ಎಂದೇ ಹೆಸರುವಾಸಿಯಾಗಿದ್ದ ದಾವಣಗೆರೆ ಪೊಲೀಸ್ ಇಲಾಖೆಯ ಶ್ವಾನ ತುಂಗಾ (13) ಸಾವಿಗೀಡಾಗಿದೆ. ಇದೇ ತಿಂಗಳ 18 ರಿಂದ ತೀವ್ರ ಜ್ವರದಿಂದ ಶ್ವಾನ ಬಳಲುತ್ತಿತ್ತು. ಇಂದು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಪಾಲಿ ಕ್ಲಿನಿಕ್ನಲ್ಲಿ ಕೊನೆಯುಸಿರೆಳೆದಿದೆ.
ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆಗೆ ಹೆಮ್ಮೆಯ ಕಿರೀಟವಾಗಿದ್ದ ತುಂಗಾ ಇಂದು ಅಂತರಾಷ್ಟ್ರೀಯ ಶ್ವಾನ ದಿನದಂದೇ ಅಗಲಿದ್ದು, ಇಡೀ ಇಲಾಖೆಗೆ ತುಂಬಲಾರದ ನಷ್ಟವಾಗಿದೆ. ಲೇಡಿ ಸಿಂಗಂ ಶ್ವಾನ ತುಂಗಾ ಆಗಸ್ಟ್ 15ರ ಸ್ವಾತಂತ್ರ್ಯ ಅಮೃತ ಮಹೋತ್ಸವ ದಿನದಂದು ಜಿಲ್ಲಾ ಕ್ರೀಡಾಂಗಣದಲ್ಲಿ ಅದ್ಭುತ ಪ್ರದರ್ಶನ ನೀಡಿ ಜನ ಮೆಚ್ಚುಗೆ ಗಳಿಸಿತ್ತು. ಆದರೆ ಬಳಿಕ ಎರಡು ದಿನದಲ್ಲೇ ಜ್ವರ ಕಾಣಿಸಿಕೊಂಡಿದ್ದು, ವೈದ್ಯರು ರಕ್ತ ಪರೀಕ್ಷೆ ನಡೆಸಿದಾಗ ಡೆಂಗ್ಯೂ ಇರುವುದು ದೃಢಪಟ್ಟಿತ್ತು.
ತದನಂತರ ಏಳೆಂಟು ದಿನಗಳ ಕಾಲ ಚಿಕಿತ್ಸೆ ನೀಡಿಲಾಗಿದೆ. ಆದರೆ ಬಿಳಿ ರಕ್ತ ಕಣ ಕಡಿಮೆಯಾದ ಹಿನ್ನೆಲೆ ಇಂದು ಸಾವನ್ನಪ್ಪಿದೆ. ಮರಣೋತ್ತರ ಪರೀಕ್ಷೆ ನಡೆಸಿ ಪೊಲೀಸರಿಗೆ ತುಂಗಾಳ ಮೃತದೇಹವನ್ನು ಹಸ್ತಾಂತರಿಸಲಾಯಿತು. ತುಂಗಾಳನ್ನು ನೋಡಿಕೊಳ್ಳುತ್ತಿದ್ದ ಪೊಲೀಸ್ ಸಿಬ್ಬಂದಿ ಕಂಬನಿ ಮಿಡಿದರು.
ಬೆಂಗಳೂರಿನ ಆಡುಗೋಡಿಯಲ್ಲಿ ತರಬೇತಿ ಪಡೆದ ತುಂಗಾ 2010ರಲ್ಲಿ ಪೊಲೀಸ್ ಇಲಾಖೆಗೆ ಸೇರಿದ ಬಳಿಕ ಖದೀಮರಿಗೆ ಸಿಂಹಸ್ವಪ್ನವಾಗಿ ಕಾಡಿದ್ದಳು. ಡಾಬರ್ ಮ್ಯಾನ್ ತಳಿಯ ಶ್ವಾನ ತುಂಗಾ ಎಲ್ಲರಲ್ಲಿ ಬೆರಗು ಮೂಡಿಸಿತ್ತು. ದಾವಣಗೆರೆ ಪೊಲೀಸ್ ಇಲಾಖೆಯಲ್ಲಿ 12 ವರ್ಷಗಳ ಕಾಲ ಸೇವೆ ಸಲ್ಲಿಸಿರುವ ತುಂಗಾ ಒಟ್ಟು 650 ಪ್ರಕರಣಗಳ ಪೈಕಿ 71 ಕೊಲೆ ಪ್ರಕರಣಗಳು, 35 ಕಳ್ಳತನ ಹಾಗೂ ದರೋಡೆ ಪ್ರಕರಣ ಭೇದಿಸಿದೆ. ಈ ಪ್ರಕರಣಗಳಲ್ಲಿ ಇಬ್ಬರಿಗೆ ಗಲ್ಲು ಶಿಕ್ಷೆ, ನಾಲ್ವರಿಗೆ ಜೀವಾವಧಿ ಶಿಕ್ಷೆಯಾಗಿದೆ.
ಪೊಲೀಸರಿಗೆ ತಲೆನೋವಾಗಿದ್ದ ಅನೇಕ ಪ್ರಕರಣಗಳನ್ನು ಕೂಡ ತುಂಗಾ ಭೇದಿಸಿತ್ತು. ಪೊಲೀಸರ ಅಚ್ಚುಮೆಚ್ಚಿನ ಶ್ವಾನವಾಗಿದ್ದ ತುಂಗಾ ಅಪರಾಧಿಗಳ ವಾಸನೆ ಹಿಡಿದು ಸೂಮಾರು 13 ಕಿಲೋಮೀಟರ್ ದೂರ ಕ್ರಮಿಸಿ ಅಪರಾಧಿಗಳ ಹಿಡಿದ ಕೀರ್ತಿ ಹೊಂದಿತ್ತು. 12 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿದ್ದ ಈ ಶ್ವಾನಕ್ಕೆ ಪೊಲೀಸ್ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಹಾಗೂ ಎಸ್ಪಿ ಸಿಬಿ ರಿಷ್ಯಂತ್ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ: ಸೂಳೆಕೆರೆ ಶೂಟೌಟ್ : ಆರೋಪಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ 'ತುಂಗಾ'ಗೆ ಸನ್ಮಾನ