ದಾವಣಗೆರೆ: ಪೊಲೀಸ್ ತಪಾಸಣೆ ವೇಳೆ ವಾಹನಗಳ ದಾಖಲಾತಿಗಳನ್ನು ನೀಡುವಲ್ಲಿ ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗುತ್ತಿದ್ದು, ಈ ಕುರಿತು ಇನ್ನು ಮುಂದೆ ಇಂತಹ ಸಮಸ್ಯೆಗಳು ನಡೆಯದಂತೆ ಜಿಲ್ಲಾ ಪೊಲೀಸ್ ಇಲಾಖೆ ಡಿಗ್ಗಿ ಲಾಕರ್ ಎಂಬ ಆ್ಯಪ್ವೊಂದನ್ನ ರೂಪಿಸಿದೆ.
ಈ ಆ್ಯಪ್ನಲ್ಲಿ ವಾಹನಗಳ ಮಾಲೀಕರು ತಮ್ಮ ವಾಹನ ಸೇರಿದಂತೆ ಇತರೆ ದಾಖಲೆಗಳನ್ನು ಸೇವ್ ಮಾಡಿಕೊಳ್ಳಬಹುದು. ಅಲ್ಲದೇ, ಪೊಲೀಸರು ವಾಹನಗಳ ತಪಾಸಣೆ ವೇಳೆ ದಾಖಲೆಗಳನ್ನು ಡಿಗ್ಗಿ ಲಾಕರ್ನಲ್ಲಿ ನೋಡಲು ಅನುಕೂಲವಾಗಲಿದೆ. ಹೀಗಾಗಿ, ಇದನ್ನು ಬಳಕೆ ಮಾಡಿಕೊಳ್ಳುವಂತೆ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಸಲಹೆ ನೀಡಿದ್ದಾರೆ.
ಇದನ್ನು ಈಗಾಗಲೇ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಅಲ್ಲದೆ, ತಪಾಸಣೆ ವೇಳೆ ಇದರಲ್ಲಿರುವ ದಾಖಲೆಗಳನ್ನು ತೋರಿಸಿದರೂ ಸಾಕು. ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿದ್ದು, ಅದನ್ನು ತಡೆಯಲು ಆಯ್ದ ಭಾಗಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಹಾಕಲಾಗಿದೆ. ಸವಾರರು ಇದನ್ನು ಗಮನಿಸಿ ವಾಹನಗಳನ್ನು ಚಲಾಯಿಸಬೇಕು.
ನಿಯಮ ಉಲ್ಲಂಘಿಸಿದರೆ ಆಯಾ ಪೊಲೀಸ್ ಠಾಣೆಗೆ ಮಾಹಿತಿ ಹೋಗುತ್ತದೆ. ಈ ಮೂಲಕ ನಾವು ನಿಯಮ ಉಲ್ಲಂಘಿಸಿದವರಿಗೆ ದಂಡ ಹಾಕುತ್ತೇವೆ ಎಂದು ಎಸ್ಪಿ ಆರ್.ಚೇತನ್ ತಿಳಿಸಿದ್ದಾರೆ. ಕಳೆದ 2016 ರಿಂದ ಇಲ್ಲಿಯವರೆಗೆ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ಸಂಚಾರ ಮಾಡುವಂತೆ ಸೂಚನೆ ನೀಡಿದ್ದಾರೆ.
ಆ್ಯಪ್ ಬಗ್ಗೆ ಸವಾರರಲ್ಲಿ ಮಾಹಿತಿ ಕೊರತೆಯಿದ್ದು, ಸುಮಾರು ಒಂದು ವರ್ಷದ ಹಿಂದೆಯೇ ಈ ಆ್ಯಪ್ ರೆಡಿ ಮಾಡಲಾಗಿದೆ. ಡಿಗ್ಗಿ ಲಾಕರ್ ಬಗ್ಗೆ ವಾಹನ ಸವಾರರಿಗೆ ಗೊತ್ತಿಲ್ಲದ ಕಾರಣ ಹೆಚ್ಚು ಮಂದಿ ಉಪಯೋಗಿಸುತ್ತಿಲ್ಲ. ಇದನ್ನು ಬಳಕೆ ಮಾಡಿದರೆ ಸವಾರರಿಗೂ ಅನುಕೂಲವಾಗುತ್ತದೆ.