ದಾವಣಗೆರೆ : ರಾಜ್ಯಾದ್ಯಂತ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ನಾಲ್ಕು ರಥಗಳು ನಾಳೆ ದಾವಣಗೆರೆಯಲ್ಲಿ ಮಿಲನ ಆಗಲಿವೆ. ರಾಜ್ಯದ ನಾಲ್ಕು ದಿಕ್ಕುಗಳಿಂದ ಆರಂಭವಾದ ವಿಜಯ ಸಂಕಲ್ಪಯಾತ್ರೆಯ ರಥಗಳು ದಾವಣಗೆರೆ ಮಹಾ ಸಂಗಮಕ್ಕೆ ಆಗಮಿಸುತ್ತಿವೆ. ವಿಜಯಸಂಕಲ್ಪ ಯಾತ್ರೆಯ ರಥಗಳು 5600 ಕಿಲೋಮೀಟರ್ ಯಾತ್ರೆ ಪೂರೈಕೆ ಮಾಡಿದ್ದು, 224ವಿಧಾನ ಸಭಾ ಕ್ಷೇತ್ರಗಳಲ್ಲಿ ಸಂಚಾರ ಮಾಡಿದೆ. ಇನ್ನು ಈ ವಿಜಯ ಸಂಕಲ್ಪ ಯಾತ್ರೆಯಲ್ಲಿ 52 ಜನ ರಾಷ್ಟ್ರೀಯ ನಾಯಕರು ಭಾಗಿಯಾಗಿದ್ದು, 132 ಕಡೆ ರೋಡ್ ಶೋ ಮಾಡಲಾಗಿದೆ. ಇದೀಗ ಯಾತ್ರೆ ಮುಗಿಸಿದ ರಥಗಳು ದಾವಣಗೆರೆ ಮಹಾ ಸಂಗಮಕ್ಕೆ ಆಗಮಿಸುತ್ತಿದ್ದು, ಸಂಜೆ ನಾಲ್ಕು ರಥಗಳ ಸಹಿತ ದಾವಣಗೆರೆ ನಗರದಲ್ಲಿ ಶೋಭಾ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ಮಾಹಿತಿ ನೀಡಿದರು.
ಸೇನಾ ಹೆಲಿಕಾಪ್ಟರ್ ಗಳಿಂದ ಪ್ರಾಯೋಗಿಕ ಹಾರಾಟ : ಮಾ 25ಕ್ಕೆ ದಾವಣಗೆರೆ ನಗರದ ಜಿಎಂಐಟಿ ಪಕ್ಕ ನಾಲ್ಕು ನೂರು ಎಕರೆ ಪ್ರದೇಶದಲ್ಲಿ ನಡೆಯಲಿರುವ ಮಹಾ ಸಂಗಮ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಿಂದ ನೇರವಾಗಿ ದಾವಣಗೆರೆ ಹ್ಯಾಲಿಪ್ಯಾಡ್ಗೆ ಬಂದಿಳಿಯಲಿದ್ದಾರೆ. ಈ ಆಗಮನದ ಹಿನ್ನೆಲೆ ಸೇನಾ ಹೆಲಿಕಾಪ್ಟರ್ ಗಳಿಂದ ಪ್ರಾಯೋಗಿಕ ಹಾರಾಟ ನಡೆಸುತ್ತಿದ್ದು. ದಾವಣಗೆರೆ ನಗರದ ಜಿಎಂಐಟಿ ಹೆಲಿಪ್ಯಾಡ್ಗೆ ಬಂದ ಸೇನಾ ಹೆಲಿಕಾಪ್ಟರ್ ಪ್ರಾಯೋಗಿಕವಾಗಿ ಹಾರಟ ನಡೆಸುತ್ತಿದೆ. ಬೆಂಗಳೂರಿನಿಂದ ವಿಶೇಷ ಸೇನಾ ಹೆಲಿಕಾಪ್ಟರ್ನಲ್ಲಿ ಜಿಎಂಐಟಿ ಹೆಲಿಪ್ಯಾಡ್ಗೆ ಪ್ರಧಾನಿ ಮೋದಿಯವರು ಮೊದಲು ಚಿಕ್ಕಬಳ್ಳಾಪುರ ಹಾಗು ಬೆಂಗಳೂರಿಗೆ ಭೇಟಿ ನೀಡಿದ ಬಳಿಕ ದಾವಣಗೆರೆಯಲ್ಲಿ ಜರಗುವ ಮಹಾಸಂಗಮದಲ್ಲಿ ಭಾಗಿಯಾಗಲಿದ್ದಾರೆ.
ನಾಲ್ಕು ಜಿಲ್ಲೆಗಳಲ್ಲ, ಏಳು ಜಿಲ್ಲೆಯಿಂದ ಆಗಮಿಸಲಿದ್ದಾರೆ ಜನ : ಈ ಸಮಾವೇಶ ನಾಲ್ಕು ಜಿಲ್ಲೆಯಿಂದ ಜನ ಕಾರ್ಯಕರ್ತರು ಆಗಮಿಸುತ್ತಾರೆ ಎಂದು ಹೇಳಲಾಗಿತ್ತು. ಅದರೇ ಇದೀಗ ಏಳು ಜಿಲ್ಲೆಯ ವ್ಯಾಪ್ತಿಗೆ ಪ್ರಧಾನಿ ನರೇಂದ್ರ ಮೋದಿ ಮಹಾ ಸಂಗಮ ಸಮಾವೇಶ ವಿಸ್ತಾರವಾಗಿದೆ. ಈ ಹಿಂದೆ ನಾಲ್ಕು ಜಿಲ್ಲೆಯ ವ್ಯಾಪ್ತಿಗೆ ಮಾತ್ರ ಮಹಾ ಸಂಗಮಕ್ಕೆ ಆಹ್ವಾನಿಸಲಾಗಿತ್ತು. ಇದೀಗ ಗದಗ, ಶಿವಮೊಗ್ಗ ವಿಜಯ ನಗರ, ದಾವಣಗೆರೆ, ಚಿತ್ರದುರ್ಗ ಹಾವೇರಿ ಹಾಗೂ ಬಳ್ಳಾರಿಯಿಂದ ಸುಮಾರು ಹತ್ತು ಸಾವಿರ ಬಸ್ಸುಗಳಲ್ಲಿ ಆರು ಲಕ್ಷ ಜನರ ಆಗಮನದ ನಿರೀಕ್ಷೆ ಇದೆ ಎಂದು ಮಹೇಶ್ ಟೆಂಗಿನಕಾಯಿ ಮಾಹಿತಿ ನೀಡಿದರು.
ನೂರು ಜನ ಆಸೀನರಾಗುವ ವೇದಿಕೆ ಸಿದ್ಧ : ದಾವಣಗೆರೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಮಹಾ ಸಂಗಮದ ಪ್ರಧಾನ ವೇದಿಕೆ ಸಿದ್ಧವಾಗಿದೆ. ಅ ವೇದಿಕೆಯಲ್ಲಿ ಒಂದು ನೂರು ಜನರು ಕೂರುವ ವ್ಯವಸ್ಥೆ ಮಾಡಲಾಗಿದ್ದು, ಮುಖ್ಯವೇದಿಕೆಯ ಪರ್ಯಾಯವಾಗಿ ಎರಡು ವೇದಿಕೆ ನಿರ್ಮಾಣ ಮಾಡಲಾಗಿದೆ ಒಂದು ವೇದಿಕೆಯಲ್ಲಿ ಹಾಲಿ ಶಾಸಕರು ಹಾಗೂ ಮತ್ತೊಂದು ವೇದಿಕೆಯಲ್ಲಿ ಮಾಜಿ ಶಾಸಕರು ಸಂಸದರು ಹಾಗೂ ರಾಜ್ಯದ ಎಲ್ಲ ಜಿಲ್ಲಾ ಬಿಜೆಪಿ ಜಿಲ್ಲಾ ಅಧ್ಯಕ್ಷರುಗಳಿಗೆ ಕೂರಲು ವ್ಯವಸ್ಥೆ ಮಾಡಲಾಗಿದೆ ಎಂದು ಮೋಹನ್ ತೆಂಗಿನಕಾಯಿ ತಿಳಿಸಿದರು.
ಇನ್ನು ಸಮಾವೇಶಕ್ಕೆ ಆಗಮಿಸುವ ಜನರಿಗೆ ಬೆಳಗ್ಗೆ ಉಪಾಹಾರಕ್ಕೆ ಉಪ್ಪಿಟ್ಟು ಕೇಸರಿ ಬಾತ್ ಹಾಗೂ ಮಧ್ಯಾಹ್ನದ ಊಟಕ್ಕೆ ಗೋಧಿ ಪಾಯಸ, ಮೊಸರನ್ನ, ಪಲಾವ್ ಸಿದ್ಧ ಪಡಿಸಲಾಗುತ್ತದೆ. ನಾಲ್ಕು ನೂರು ಊಟದ ಕೌಂಟರ್ ತೆರೆಯಲು ನಿರ್ಧಾರ ಮಾಡಲಾಗಿದ್ದು, ಒಂದು ಸಾವಿರ ಅಡುಗೆ ಭಟ್ಟರಿಂದ ಊಟ ತಿಂಡಿ ತಯಾರಿ ಕಾರ್ಯ ನಡೆಯುತ್ತದೆ. ಹಾಗೂ ವೇದಿಕೆಯ ಮುಂಭಾಗಕ್ಕೆ ಎರಡು ಲಕ್ಷ ಮಾತ್ರ ಆಸನದ ವ್ಯವಸ್ಥೆ ಮಾಡಲಾಗಿದೆ ಎಂದು ಮೋಹನ್ ತೆಂಗಿನಕಾಯಿ ಹೇಳಿದರು.
ಇದನ್ನೂ ಓದಿ : ಸಿದ್ದರಾಮಯ್ಯರಂತ ನಾಯಕರಿಗೆ ಕ್ಷೇತ್ರವೇ ಸಿಗುತ್ತಿಲ್ಲ, ಅವರಿಗೆ ಈ ಪರಿಸ್ಥಿತಿ ಬರಬಾರದಿತ್ತು: ಶಾಸಕ ಕುಮಾರ್ ಬಂಗಾರಪ್ಪ