ದಾವಣಗೆರೆ : ಅವರು ಮೂಲತಃ ಆಂಧ್ರದಿಂದ ಆಗಮಿಸಿ ದಾವಣಗೆರೆಯ ಸುತ್ತಮುತ್ತ ಕೃಷಿ ಚಟುವಟಿಕೆ ಮಾಡ್ತಾ ಜೀವನ ಸಾಗಿಸುತ್ತಿದ್ದವರು. ಯಾರೋ ದುರುಳರು ಬಂದು ಆ ರೈತನ ಹೊಲಕ್ಕೆ ನೀರು ಕಟ್ಟುವ ಕಾಲುವೆಯ ನೀರಿಗೆ ಟ್ಯಾಂಕರ್ ಮೂಲಕ ರಾಸಾಯನಿಕ ತ್ಯಾಜ್ಯ (ಕೆಮಿಕಲ್) ಸುರಿದ ಬೆನ್ನಲ್ಲೇ ಅವರ ಬದುಕು ಬರ್ಬಾದ್ ಆಗಿದೆ. ನೀರಿನಲ್ಲಿ ರಾಸಾಯನಿಕ ಹರಿದುಬಂದು ಹೊಲ ಸೇರಿದ್ದರಿಂದ ಇಡೀ ಭತ್ತದ ಪೈರು ಕಪ್ಪು ಬಣ್ಣಕ್ಕೆ ತಿರುಗಿ ಸುಟ್ಟಿರುವ ರೀತಿ ಭಾಸವಾಗುತ್ತಿದೆ. ಸಾಲಸೋಲ ಮಾಡಿ ಬೆಳೆದಿದ್ದ ಬೆಳೆ ನೆಲಕಚ್ಚಿದ್ದರಿಂದ ಅನ್ನದಾತ ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾನೆ.
ದಾವಣಗೆರೆಯ ಹೊರವಲಯದ ಬಾತಿ ಕೆರೆ ಕಾಲುವೆಯ ಕೂಗಳತೆಯಲ್ಲಿ ಭತ್ತ ಬೆಳೆಯುವ ರೈತನ ಬದುಕು ಕೆಮಿಕಲ್ ರಾಸಾಯನಿಕದಿಂದ ಸಂಕಷ್ಟಕ್ಕೆ ಸಿಲುಕಿದೆ. ಈ ಮಹಾಮಾರಿ ಕೆಮಿಕಲ್ನಿಂದಾಗಿ ರೈತ ಬೆಳೆದಿದ್ದ ಭತ್ತದ ಬೆಳೆ ಸುಟ್ಟು ಹೋಗುತ್ತಿದೆ. ದಾವಣಗೆರೆ ತಾಲೂಕಿನ ಕಡ್ಲೆಬಾಳು ಗ್ರಾಮದ ರೈತ ವಾಸು ಎನ್ನುವರು ಬೇರೆಯವರ ಜಮೀನನ್ನು ಗುತ್ತಿಗೆ ಪಡೆದು ಬೆಳೆ ಬೆಳೆದಿದ್ದು, ಒಂದು ಎಕರೆ ಭತ್ತದ ಗದ್ದೆ ಸಂಪೂರ್ಣ ಹಾಳಾಗಿದೆ.
ಈ ಗದ್ದೆಗೆ ಕೆಮಿಕಲ್ ನೀರು ಸೇರ್ಪಡೆಯಾದ ಹಿನ್ನೆಲೆ ಬೆಳೆಯುವ ಪೈರು ಕಪ್ಪು ಬಣ್ಣಕ್ಕೆ ತಿರುಗಿ, ಸುಟ್ಟ ರೀತಿ ಕಾಣುತ್ತಿದೆ. ಈ ಜಮೀನಿಗೆ ಹಾಯಿಸುವ ನೀರು ಭದ್ರ ಚಾನಲ್ನಿಂದ ಬರುತ್ತಿದ್ದು, ಆ ಕೆನಾಲ್ಗೆ ಆಸಿಡ್ ಮಿಶ್ರಿತ ಕೆಮಿಕಲ್ ಅನ್ನು ಟ್ಯಾಂಕರ್ ಮೂಲಕ ದುಷ್ಕರ್ಮಿಗಳು ರಾತ್ರೋರಾತ್ರಿ ಸುರಿದಿದ್ದರಿಂದ ಈ ಅನಾಹುತಕ್ಕೆ ಕಾರಣವಾಗಿದೆ. ಇದರಿಂದ ಭದ್ರ ಕೆನಾಲ್ ನೀರು ಸಂಪೂರ್ಣ ಕಲುಷಿತವಾಗಿದೆ. ಈ ನೀರು ವಾಸು ಅವರ ಜಮೀನಿಗೆ ಹರಿದಿದ್ದು, ಇದರಿಂದ ಭತ್ತದ ಪೈರು ಸಂಪೂರ್ಣ ಹಾಳಾಗಿದೆ.
ಕಪ್ಪು ಬಣ್ಣಕ್ಕೆ ತಿರುಗಿದ ಬೆಳೆ : ಈ ಬಗ್ಗೆ ರೈತ ವಾಸು ಮಾತನಾಡಿ, ''ಜಮೀನಿಗೆ ಬರುವ ನೀರಿನ ಕಾಲುವೆಗೆ ಕೆಮಿಕಲ್ ಅನ್ನು ಕಿಡಿಗೇಡಿಗಳು ಸುರಿದು ಹೋಗಿದ್ದರಿಂದ ಭತ್ತ ಕಪ್ಪು ಬಣ್ಣಕ್ಕೆ ತಿರುಗಿದೆ. ಯಾವ ಕೆಮಿಕಲ್ ಅನ್ನೋದು ಗೊತ್ತಾಗುತ್ತಿಲ್ಲ. ನಾವು ಜಮೀನಿಗೆ ನೀರು ಕಟ್ಟುವ ಕಾಲುವೆ ನೀರಿಗೆ ಟ್ಯಾಂಕರ್ ಮೂಲಕ ಕೆಮಿಕಲ್ ಡಂಪ್ ಮಾಡಿದ್ದಾರೆ. ಇದು ಎರಡನೇ ಬಾರಿ ಸುರಿದಿದ್ದು, ನೀರು ಕಟ್ಟಿದ್ದರಿಂದ ಜಮೀನಿನಲ್ಲಿ ಭತ್ತ ಕಪ್ಪು ಬಣ್ಣಕ್ಕೆ ತಿರುಗಿದೆ. ನಿಧಾನವಾಗಿ ಈ ಕೆಮಿಕಲ್ ಇಡೀ ಬೆಳೆಗೆ ಆವರಿಸುತ್ತಿದೆ. ನಾವು ಕಾಳುಗುತ್ತಿಗೆ ಹಿಡಿದು ಬೇರೆಯವರ ಹೊಲ ಮಾಡ್ತಿದ್ದೇವೆ. ಕಿಡಿಗೇಡಿಗಳು ಈ ರೀತಿ ಮಾಡಿದ್ದು ಯಾವ ನ್ಯಾಯ?. ಈ ರೀತಿ ನಮ್ಮ ಜಮೀನಿಗೆ ಈ ಕೆಮಿಕಲ್ ನೀರು ಬಿಟ್ಟಿದ್ದರಿಂದ ಇಡೀ ಹೊಲ ಸುಟ್ಟು ಹೋಗಿರುವ ರೀತಿ ಭಾಸವಾಗುತ್ತಿದೆ'' ಎಂದು ಅಳಲನ್ನು ತೋಡಿಕೊಂಡ್ರು.
ಅಲ್ಲದೆ ಕೆಲವೊಂದು ಕಂಪನಿಗಳ ಕೆಮಿಕಲ್ಗಳನ್ನು ರಾತ್ರೋರಾತ್ರಿ ಟ್ಯಾಂಕರ್ಗಳಲ್ಲಿ ತಂದು ಸುರಿದು ಹೋಗುತ್ತಿರುವ ಘಟನೆಗಳು ಮರುಕಳಿಸುತ್ತಿವೆ. ಇದರಿಂದ ಭದ್ರಾ ಕೆನಾಲ್ನ ನೀರು ಕಲುಷಿತವಾಗಿ ಜಲಚರ ಪ್ರಾಣಿಗಳು ಅಸುನೀಗುತ್ತಿವೆ. ಜೊತೆಗೆ ರೈತರ ಜಮೀನುಗಳಿಗೆ ಕೆಮಿಕಲ್ ನೀರು ಸೇರುತ್ತಿರುವುದರಿಂದ ಇಡೀ ಭತ್ತದ ಗದ್ದೆ ಕಪ್ಪು ಬಣ್ಣಕ್ಕೆ ತಿರುವಿ ಕೆಟ್ಟ ವಾಸನೆ ಬರುತ್ತಿದೆ. ಇನ್ನು ಗದ್ದೆಯಲ್ಲಿ ಜಿಡ್ಡು ಜಿಡ್ಡಾದ ನೀರು ನಿಂತಿದ್ದು, ಈ ನೀರನ್ನು ರೈತರು ಪಂಪ್ಸೆಟ್ ಮೂಲಕ ಹೊರ ಹಾಕುತ್ತಿದ್ದಾರೆ. ಇದು ರೈತರಿಗೆ ಸಂಕಷ್ಟ ತಂದೊಡ್ಡಿದೆ. ಅಲ್ಲದೆ ಕೆಮಿಕಲ್ ನೀರು ನಿಂತ ಭೂಮಿ ಕೂಡ ಬರಡು ಭೂಮಿಯಾಗುವ ಆತಂಕವನ್ನು ರೈತರು ವ್ಯಕ್ತಪಡಿಸುತ್ತಿದ್ದಾರೆ.
ಈ ಬಗ್ಗೆ ರೈತ ಹನುಮಂತ ಎಂಬುವರು ಮಾತನಾಡಿ, ''ಹೊಲಕ್ಕೆ ಕಟ್ಟುವ ನೀರಿನಲ್ಲಿ ಆಸಿಡ್ ರೀತಿಯ ಕೆಮಿಕಲ್ ಹಾಕಿದ್ದು, ಬೆಳೆ ಸುಟ್ಟು ಹೋದ ರೀತಿ ನೆಲಕಚ್ಚಿದೆ. ಇದೇ ನೀರನ್ನ ಜಾನುವಾರು ಸೇವನೆ ಮಾಡಿದ್ರೆ ಅಧೋಗತಿ ಆಗ್ತಿತ್ತು. ಎರಡನೇ ಬಾರಿ ಈ ರೀತಿ ಆಗಿದೆ. ಜಾಲಿ ಬೆದ್ಲು ಜಮೀನಿಗೆ ಈ ಆ್ಯಸಿಡ್ ಸುರಿಯಬಹುದಿತ್ತು. ಈಗಾಗಲೇ ಒಂದು ಎಕರೆ ಈ ರೀತಿ ಆಗಿದ್ದು, ಇಡೀ ಹೊಲವನ್ನು ಆವರಿಸಿಕೊಳ್ಳಬಹುದು. ಇದೇ ನೀರು ಬೇರೆ ಹೊಲಗಳಿಗೆ ಹೋಗಿದ್ರೆ ನಮ್ಮನ್ನು ಆ ದೇವರೇ ಕಾಯಬೇಕಾಗಿತ್ತು. ನಾವು ರಾತ್ರಿ ನೀರು ಕಟ್ಟಬೇಕಾಗಿತ್ತು. ಆದರೆ ನೀರು ಕಟ್ಟಿಲ್ಲ. ಹೀಗಾಗಿ ನಮ್ಮ ಭತ್ತ ಉಳಿದಿದೆ'' ಎಂದು ತಿಳಿಸಿದರು.
ಸಿಟಿ ಹತ್ತಿರ ಜಮೀನು ಇದೆ ಎನ್ನುವ ಖುಷಿಗಿಂತ ಇಲ್ಲಿನ ರೈತರಿಗೆ ಆತಂಕವೇ ಹೆಚ್ಚು. ಈಗಾಗಲೇ 20 ಸಾವಿರಕ್ಕೂ ಹೆಚ್ಚು ಹಣ ಖರ್ಚು ಮಾಡಿ ಬೆಳೆ ಬೆಳೆದಿದ್ದ ರೈತನಿಗೆ ಕೆಮಿಕಲ್ ನೀರಿನಿಂದ ಇಡೀ ಬೆಳೆ ಹಾಳಾಗುವ ಸ್ಥಿತಿ ತಲುಪಿದೆ. ಏನೇ ಆಗಲಿ ಈ ರೀತಿ ರೈತರಿಗೆ ತೊಂದರೆ ಕೊಡುವ ಕಿಡಿಗೇಡಿಗಳಿಗೆ ತಕ್ಕ ಶಿಕ್ಷೆ ಆಗಲಿ ಎಂದು ಪೊಲೀಸರಿಗೆ ರೈತರು ಮನವಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಶುಗರ್ ಫ್ಯಾಕ್ಟರಿ ಚಿಮಣಿಯಿಂದ ನಿತ್ಯ ಗೋಳಾಟ: ಹಳ್ಳಿಯ ಜನರ ಆರೋಪ