ದಾವಣಗೆರೆ : ಜಿಲ್ಲೆಯ ಚನ್ನಗಿರಿ ಅರೆ ಮಲೆನಾಡು ಭಾಗ ಎಂದೇ ಖ್ಯಾತಿ ಗಳಿಸಿದೆ. ಆದರೆ, ತಾಲೂಕಿನ ಗರಗ ಗ್ರಾಮದಲ್ಲಿರುವ ಕೆರೆಯಲ್ಲಿ ಮಾತ್ರ ಹನಿ ನೀರಿಲ್ಲದೆ ಇಡೀ ಕೆರೆ ಭಣಗುಡುತ್ತಿದೆ. ಹೀಗಾಗಿ, ಇಡೀ ಗ್ರಾಮಸ್ಥರು ನೀರಿಲ್ಲದೆ ಹೈರಾಣಾಗಿದ್ದಾರೆ.
ಶಾಂತಿಸಾಗರ (ಸೂಳೆಕೆರೆ)ದಿಂದ ದಾವಣಗೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಹಲವು ಭಾಗಗಳಿಗೆ ನೀರು ಕೊಂಡೊಯ್ಯಲಾಗಿದೆ. ಶಾಂತಿ ಸಾಗರದ ಪಕ್ಕವೇ ಇರುವ ಈ ಗರಗ ಗ್ರಾಮಕ್ಕೆ ಮಾತ್ರ ಜಲ ಭಾಗ್ಯ ಇಲ್ಲದಂತಾಗಿದೆ. ಇದರಿಂದ ರೋಸಿ ಹೋಗಿರುವ ಗ್ರಾಮದ ಜನರು ಇದೀಗ ಮುದ್ದೇನಹಳ್ಳಿ ಹಳ್ಳದಿಂದ ಕೆರೆ ತುಂಬಿಸಲು ಯೋಜನೆ ರೂಪಿಸಿದ್ದಾರೆ.
ಈ ಯೋಜನೆಗೆ ಸುಮಾರು 30 ಲಕ್ಷ ರೂಪಾಯಿ ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ. ಹೀಗಾಗಿ, ದಾನಿಗಳ ನೆರವಿನಿಂದ ಕೆರೆ ತುಂಬಿಸಲು ಸ್ಥಳೀಯರು ಮುಂದಾಗಿದ್ದಾರೆ. ಹಳ್ಳಕ್ಕೆ ಸುಮಾರು 2 ಕಿ.ಮೀ ದೂರವಾಗಲಿದೆ. ಹೀಗಾಗಿ, ಪೈಪ್ ಲೈನ್ ಅಳವಡಿಕೆಗೆ ಪ್ಲಾನ್ ಮಾಡಿದ್ದಾರೆ.
ಈ ಗರಗ ಗ್ರಾಮದಲ್ಲಿರುವ ಕೆರೆ 12 ವರ್ಷಗಳಿಂದ ಬತ್ತಿ ಹೋಗಿದೆ. ಕೆರೆ ತುಂಬಿದರೆ ಮಾತ್ರ ಜಾನುವಾರುಗಳಿಗೆ ಕುಡಿಯುವ ನೀರು ಸಿಗಲಿದೆ. ಅಂತರ್ಜಲ ಮಟ್ಟ ಹೆಚ್ಚಳದಿಂದ ಬೋರ್ವೆಲ್ಗಳಿಗೆ ಹೆಚ್ಚು ಅನುಕೂಲವಾಗಲಿದೆ. ಈ ಕಾರಣದಿಂದ ಗ್ರಾಮಸ್ಥರೇ ಕೆರೆ ತುಂಬಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಈ ಒಂದು ಕೆರೆ ಭರ್ತಿಯಾದರೆ ಪಕ್ಕದ ಹೊನ್ನ ನಾಯ್ಕನಹಳ್ಳಿ,ಗುಳ್ಳಹಳ್ಳಿ ಹಾಗೂ ಗರಗ ಗ್ರಾಮದ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಅಂತರ್ಜಲ ಮಟ್ಟ ಹೆಚ್ಚಳದಿಂದ ಸುತ್ತಮುತ್ತಲಿನ ತೋಟಗಳ ಬೋರ್ವೆಲ್ ರಿಚಾರ್ಜ್ ಆಗಲಿದೆ. ಅಲ್ಲದೆ, ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಬವಣೆ ನೀಗಲಿದೆ. ಹೀಗಾಗಿ, ಜನಪ್ರತಿನಿಧಿಗಳು ಮಾಡಬೇಕಾದ ಕೆಲಸವನ್ನು ಗ್ರಾಮಸ್ಥರೇ ಮಾಡಲು ಮುಂದಾಗಿದ್ದಾರೆ.
ಓದಿ : ಚಾಮರಾಜನಗರದ ಈ ಗಣಪನಿಗಿಲ್ಲ ಜಾತಿ ಹಂಗು.. ಅರ್ಚಕರ ಅಗತ್ಯ ಮೊದಲೇ ಇಲ್ಲ..