ದಾವಣಗೆರೆ: ಇನ್ಮುಂದೆ ಅರ್ಜಿಗಳನ್ನು ಹಿಡಿದು ಪಿಂಚಣಿಗಾಗಿ ಕಚೇರಿಗೆ ಅಲೆಯುವ ಅವಶ್ಯಕತೆ ಇಲ್ಲ. ಏಕೆಂದರೆ ಮನೆ ಬಾಗಿಲಿಗೆ ಪಿಂಚಣಿ ಮಂಜೂರಾತಿ ಆದೇಶ ಬರಲಿದೆ ಎಂದು ಕಂದಾಯ ಸಚಿವ ಆರ್. ಆಶೋಕ್ ವೃದ್ಧರಿಗೆ ಅಭಯ ನೀಡಿದ್ದಾರೆ.
ಜಿಲ್ಲೆಯ ನ್ಯಾಮತಿ ತಾಲೂಕಿನ ಸುರಹೊನ್ನೆ ಗ್ರಾಮದಲ್ಲಿ 'ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ' ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸ್ಥಳೀಯವಾಗಿ ಹಲವು ಸಮಸ್ಯೆಗಳನ್ನು ಅಲಿಸುವ ಸಲುವಾಗಿ ಹಾಗೂ ಸರ್ಕಾರಿ ಕೆಲಸಗಳಿಗಾಗಿ ಜನರು ಕಚೇರಿಯಿಂದ ಕಚೇರಿಗೆ ಅಲೆದಾಡುವುದನ್ನು ತಪ್ಪಿಸಲು ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜನರ ಅರ್ಜಿಗಳನ್ನು ಪಡೆದು ಹಿಂದಿರುಗುವ ಉದ್ದೇಶ ಈ ಕಾರ್ಯಕ್ರಮದ್ದಲ್ಲ. ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ ಮಾಡಿ ಶಾಲೆ, ಗ್ರಾಮೀಣ ಭಾಗದ ಸಮಸ್ಯೆಗಳ ಬಗ್ಗೆ ಪರಿಹಾರ ಕಂಡುಕೊಳ್ಳಬೇಕು ಎಂದರು.
ಪಡಿತರ ಚೀಟಿಯೊಂದಿಗೆ ಆಧಾರ್ ಸಂಖ್ಯೆಯನ್ನು ಜೋಡಿಸಲಾಗಿದ್ದು, ಹೀಗಾಗಿ 60 ವರ್ಷ ಮೇಲ್ಪಟ್ಟವರಿಗೆ ಇನ್ನು ಮುಂದೆ ಅಧಿಕಾರಿಗಳೇ ಅವರ ಮನೆ ಬಾಗಿಲಿಗೆ ತೆರಳಿ ಪಿಂಚಣಿ ಆದೇಶ ಪತ್ರ ನೀಡಬೇಕು ಎಂದು ಸೂಚಿಸಿದರು.