ದಾವಣಗೆರೆ: ಕಿಚ್ಚ ಸುದೀಪ್ ಅಭಿಮಾನಿಗಳು ಪೈಲ್ವಾನ್ ಪೋಸ್ಟರ್ ಮುಂದೆ ಕುರಿ ಕತ್ತರಿಸಿ, ಪೋಸ್ಟರ್‌ಗೆ ರಕ್ತಾಭಿಷೇಕ ಮಾಡುವ ಮೂಲಕ ಅತಿರೇಕ ಮೆರೆದಿದ್ದಾರೆ. ಇದಕ್ಕೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಜಗಳೂರು - ಚಳ್ಳಕೆರೆ ತಾಲೂಕುಗಳ ನಡುವೆ ಇರುವ ಮಲೇ ಬೋರನಹಟ್ಟಿ ಗ್ರಾಮದಲ್ಲಿ ಕಿಚ್ಚನ ಅಭಿಮಾನಿಗಳು ಕುರಿ ಕಡಿದು ರಕ್ತಾಭಿಷೇಕ ಮಾಡಿದ್ದಾರೆ. ಈ ಹಿಂದೆ ಸುದೀಪ್ ಹಾಗೂ ಶಿವರಾಜ್ ಕುಮಾರ್ ನಟಿಸಿದ 'ದಿ-ವಿಲನ್' ಚಿತ್ರದ ಬಿಡುಗಡೆ ವೇಳೆ ಕಿಚ್ಚನ ಅಭಿಮಾನಿಗಳು ಪ್ರಾಣಿಗಳನ್ನು ಬಲಿ ಕೊಟ್ಟಿದ್ದರು. ಆಗ ಸುದೀಪ್ ಅವರ ಕಟೌಟ್ ಹಾಗೂ ಪೋಸ್ಟರ್‌ಗೆ ರಕ್ತದ ಅಭಿಷೇಕ ಮಾಡಿದ್ದರು.
ಅಭಿಮಾನಿಗಳು ಮಾಡಿದ ಹುಚ್ಚಾಟಕ್ಕೆ ಕಿಚ್ಚ ಸುದೀಪ್ ಟ್ವಿಟರ್ನಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಈ ರೀತಿಯ ಕೃತ್ಯಗಳನ್ನು ನಡೆಸುತ್ತಿರುವುದು ನಿಜಕ್ಕೂ ಅಮಾನವೀಯ. ನಾನು ನಿಮ್ಮ ಬಳಿ ಮನವಿ ಮಾಡಿಕೊಳ್ಳುತ್ತೇನೆ, ದಯವಿಟ್ಟು ಇದನ್ನು ನಿಲ್ಲಿಸಿ. ವಿಲನ್ ಚಿತ್ರತಂಡ ನಿಮ್ಮ ಈ ರೀತಿಯ ಪ್ರೀತಿ ಹಾಗೂ ಗೌರವ ನೋಡಲು ಇಷ್ಟಪಡುವುದಿಲ್ಲ. ದಯವಿಟ್ಟು ಯಾರು ಪ್ರಾಣಿಗಳನ್ನು ಬಲಿ ಕೊಡಬೇಡಿ' ಎಂದು ಟ್ವೀಟ್ ಮಾಡಿ ಅಭಿಮಾನಿಗಳಲ್ಲಿ ರಿಕ್ವೆಸ್ಟ್ ಮಾಡಿದ್ರು. ಆದ್ರೆ ಈಗ ಮತ್ತೆ ಸುದೀಪ್ ಅಭಿಮಾನಿಗಳು ಮಾಣಿಕ್ಯನ ಮನವಿಗೆ ಬೆಲೆ ಕೊಡದೇ, ಕುರಿ ಬಲಿ ಕೊಡುವ ಮೂಲಕ ಅಂದಾಭಿಮಾನ ಮೆರೆದಿದ್ದಾರೆ. ಇಂತಹ ಅಭಿಮಾನಿಗಳಿಗೆ ಕಿಚ್ಚ ಏನಂತಾರೆ ಕಾದು ನೋಡಬೇಕಿದೆ.