ದಾವಣಗೆರೆ: ಸರ್ಕಾರದಲ್ಲಿ ವೀರಶೈವ ಲಿಂಗಾಯತ ಅಧಿಕಾರಿಗಳನ್ನು ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಹೇಳಿದ್ದು ನಿಜ. ನಮ್ಮ ಸಮಾಜದ ಅಧಿಕಾರಿಗಳಿಗೆ ತೊಂದರೆಯಾಗಿದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ, ಅಖಿತ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರಿಗಳನ್ನು ಮೂಲೆಗುಂಪು ಮಾಡಲಾಗಿದೆ ಎಂದು ನೀಡಿರುವ ಹೇಳಿಕೆ ಕುರಿತು ಮಾಧ್ಯಮದವರ ಪ್ರಶ್ನೆಗೆ ಶುಕ್ರವಾರ ರಾತ್ರಿ ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯಿಸಿದ್ದಾರೆ. ಹೌದು, ಆ ರೀತಿಯಾಗಿ ಹೇಳಿದ್ದು ನಿಜ. ಬೆಂಗಳೂರಿನಲ್ಲಿ ವೀರಶೈವ ಮಹಾಸಭಾದ ಕಾರ್ಯಕ್ರಮ ಇತ್ತು. ಅಲ್ಲಿ ನನಗೆ ಹಾನಗಲ್ ಕುಮಾರಸ್ವಾಮಿಗಳ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಭಾಷಣ ಮಾಡಬೇಕಾದರೆ, ಇರತಕ್ಕಂತ ಸತ್ಯ ಹೇಳಿದ್ದೇನೆ ಎಂದು ತಿಳಿಸಿದರು.
ಕೆಲ ಅಧಿಕಾರಿಗಳಿಗೆ ಮುಖ್ಯವಾದ ಹುದ್ದೆಗಳು ಕೊಟ್ಟಿಲ್ವಾ ಎಂಬ ಪ್ರಶ್ನೆಗೆ ಶಾಮನೂರು ಅವರು, ಬಹಳ ಜನಕ್ಕೆ ಹುದ್ದೆಗಳು ಕೊಟ್ಟಿಲ್ಲ. ಅವರು ಬೆಂಗಳೂರಲ್ಲಿ ತಿರುಗಾಡುತ್ತಿದ್ದಾರೆ. ನಾನು ಈ ರೀತಿಯ ಹೇಳಿಕೆ ನೀಡಿಲ್ಲ ಎಂದು ಅಲ್ಲಗಳೆಯಲ್ಲ. ಬಹಳ ಜನರಿಗೆ ಅನುಕೂಲತೆ ಆಗಿಲ್ಲ. ಒಟ್ಟು ಸಮಾಜಕ್ಕೆ ತೊಂದರೆಯಾಗಿದೆ. ನಮ್ಮ ಸಮಾಜದ ಅಧಿಕಾರಿಗಳಿಗೆ ತೊಂದರೆಯಾಗಿದೆ. ನಾನು ಕ್ಯಾಬಿನೆಟ್ನಲ್ಲಿ ಇಲ್ಲ. ಬರೀ ಎಂಎಲ್ಎ ಆಗಿರುವುದು. ನಾನು ಯಾವ ಮಂತ್ರಿಗಳನ್ನೂ ಕೇಳಲು ಹೋಗಿಲ್ಲ ಎಂದು ಅತೃಪ್ತಿ ವ್ಯಕ್ತಪಡಿಸಿದರು.
ಇದೇ ವೇಳೆ, ಲಿಂಗಾಯತ ಸಿಎಂ ಕುರಿತು ಪ್ರತಿಕ್ರಿಯಿಸಿದ ಅವರು, ಲಿಂಗಾಯತ ಸಿಎಂ ವೀರೇಂದ್ರ ಪಾಟೀಲರು ಇದ್ದರು. ಅವರ ಕಾಲದಲ್ಲಿ ನಾವು ಆಡಳಿತ ಮಾಡಿದ್ದೇವೆ. ನಮ್ಮವರನ್ನು ಚೆನ್ನಾಗಿ ಇಟ್ಟುಕೊಂಡಿದ್ದರು. ಈಗೆಲ್ಲ ನಮ್ಮವರು ಕಂಗಾಲಾಗಿದ್ದಾರೆ. ಡಿಸಿಎಂ ತೆಗೆದುಕೊಂಡು ಏನ್ ಮಾಡೋದು. ಆದರೆ ಸಿಎಂ ಆಗಬೇಕು. ಅದಕ್ಕೆ ನಮ್ಮ ಬೇಡಿಕೆ ಇದ್ದೇ ಇದೆ ಎಂದು ತಿಳಿಸಿದರು.
ಶಾಮನೂರುವರಿಗೂ ಸಿಎಂ ಆಗುವ ಆರ್ಹತೆಯಿದೆ ಎಂದ ಕೆ ಎಚ್ ಮುನಿಯಪ್ಪ: ಐದು ವರ್ಷವೂ ನಮ್ಮ ಸರ್ಕಾರವೇ ಇರಲಿದೆ. ಶಾಮನೂರು ಶಿವಶಂಕರಪ್ಪ ಅವರೂ ಸೇರಿದಂತೆ 224 ಶಾಸಕರಿಗೂ ಸಿಎಂ ಆಗುವ ಅರ್ಹತೆ ಇದೆ. ಶಾಮನೂರು ಅವರನ್ನು ಒಳಗೊಂಡಂತೆ ಎಲ್ಲರೂ ಸಹಮತದಿಂದ ಈಗಿನ ಸಿಎಂ ಆಯ್ಕೆ ಮಾಡಿದ್ದಾರೆ. ನಮ್ಮಲ್ಲಿ ಏನೇ ಬದಲಾವಣೆಗಳಿದ್ದರೂ ಬೇಡಿಕೆಗಳಿದ್ದರೂ ಅದನ್ನು ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ. ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಪ್ರಜಾಪ್ರಭುತ್ವ ಮಾದರಿಯಲ್ಲಿ ಎಲ್ಲರಿಗೂ ಮಾತನಾಡುವ ಹಾಗೂ ಅವರವರ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕಿದೆ ಎಂದು ಬೆಂಗಳೂರಿನಲ್ಲಿ ಸಚಿವ ಕೆ ಎಚ್ ಮುನಿಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಶಾಮನೂರು ಜೊತೆ ಚರ್ಚಿಸುತ್ತೇನೆಂದ ಡಿಕೆಶಿ: ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿ ಕೆ ಶಿವಕುಮಾರ್, 'ಶಾಮನೂರು ಶಿವಶಂಕರಪ್ಪ ಅವರು ಏಕೆ ಹೀಗೆ ಹೇಳಿದ್ದಾರೆ ಎನ್ನುವ ಕುರಿತು ಅವರ ಬಳಿ ಚರ್ಚೆ ಮಾಡುತ್ತೇನೆ' ಎಂದಿದ್ದಾರೆ. ಲಿಂಗಾಯತ ಅಧಿಕಾರಿಗಳದ್ದು ನಾಯಿಪಾಡು ಮತ್ತು ಲಿಂಗಾಯತರಿಗೆ ಡಿಸಿಎಂ ಸ್ಥಾನ ಬೇಡ ಸಿಎಂ ಸ್ಥಾನ ಬೇಕು ಎನ್ನುವ ಹೇಳಿಕೆಯನ್ನು ಮಾಧ್ಯಮದವರು ಪ್ರಸ್ತಾಪಿಸಿದಾಗ, ''ಹೇಳಿಕೆ ಬಗ್ಗೆ ನನಗೆ ತಿಳಿದಿಲ್ಲ, ತಿಳಿದುಕೊಂಡು ಮಾತನಾಡುತ್ತೇನೆ'' ಎಂದರು.
ಡಿಜೆ ಹಳ್ಳಿ, ಕೆಜೆ ಹಳ್ಳಿ ಪ್ರಕರಣದ ಮ್ಯಾಜಿಸ್ಟ್ರೇಟ್ ವರದಿಯನ್ನು ಟೀಕಿಸಿದ್ದ ನೀವು ಈಗ ಸ್ವೀಕರಿಸಿದ್ದೀರಿ ಎಂಬ ಪ್ರಶ್ನೆಗೆ, ''ಇದಕ್ಕೆ ಗೃಹ ಸಚಿವರಾದ ಪರಮೇಶ್ವರ್ ಅವರು ಉತ್ತರಿಸುತ್ತಾರೆ'' ಎಂದು ಡಿ ಕೆ ಶಿವಕುಮಾರ್ ಹೇಳಿದರು.