ದಾವಣಗೆರೆ : ರಾಜ್ಯದಲ್ಲಿ ನಾಯಕ ಸಮಾಜದವರು ಮುಂದೆ ಡಿಸಿಎಂ ಹಾಗು ಸಿಎಂ ಆಗಬೇಕು. ಸಿಎಂ ಆಗೋ ಅರ್ಹತೆ ಇರೋದು ಸತೀಶ್ ಜಾರಕಿಹೊಳಿಗೆ ಮಾತ್ರ ಎಂದು ಸಹಕಾರ ಸಚಿವ ಕೆ ಎನ್ ರಾಜಣ್ಣ ನಾಯಕ ಸಮುದಾಯದ ಡಿಸಿಎಂ ಆಗಬೇಕು ಎಂಬ ದಾಳ ಉರುಳಿಸಿದರು. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ವಾಲ್ಮೀಕಿ ಮಠದಲ್ಲಿ ನಡೆದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಮುಂದಿನ ದಿನಗಳಲ್ಲಿ ನಮ್ಮ ಸಮುದಾಯ ವ್ಯಕ್ತಿ ಸಿಎಂ ಆಗಬೇಕು. ನಾನು ಮುಂದೆ ಯಾವುದೇ ಚುನಾವಣೆಯಲ್ಲಿ ನಿಲ್ಲೋದಿಲ್ಲ. ಆದರೆ ನಮ್ಮ ಗುರಿ ಇರೋದು ಒಂದೇ, ನಮ್ಮ ಸಮುದಾಯದ ವ್ಯಕ್ತಿ ಮುಂದಿನ ಮುಖ್ಯಮಂತ್ರಿ ಆಗೋದು. ಅದಕ್ಕೆ ನಮ್ಮ ಸತೀಶ್ ಜಾರಕಿಹೊಳಿಗೆ ಎಲ್ಲ ಅರ್ಹತೆ ಇದೆ. ಆಗ ನಮ್ಮ ಸಮಾಜವು ಇನ್ನು ಉತ್ತಮವಾಗುತ್ತದೆ. ನಾವು ಈಗ ಡಿಸಿಎಂ ಸ್ಥಾನ ಕೇಳಲು ಹೊರಟಿದ್ದೀವಿ. ಆದರೆ ರಾಜಕೀಯ ಸಂಘರ್ಷಗಳಲ್ಲಿ ಅದು ಆಗಲಿಲ್ಲ. ಡಿಸಿಎಂ ಬಗ್ಗೆ ಕೂಡ ಮುಂದೆ ಕೇಳುತ್ತೇವೆ ಎಂದರು.
ನಟ ಕಿಚ್ಚ ಸುದೀಪ್ ವಿರುದ್ಧ ರಾಜಣ್ಣ ಕಿಡಿ : ನಟ ಸುದೀಪ್ ವಿರುದ್ಧ ಸಹಕಾರ ಸಚಿವ ಕೆ ಎನ್ ರಾಜಣ್ಣ ಕಿಡಿಕಾರಿದರು. ಕಿಚ್ಚ ಸುದೀಪ್ ಸಮುದಾಯದ ವಿರುದ್ಧವೇ ಪ್ರಚಾರ ಮಾಡಿದ್ದಾರೆ. ಸಾಮಾನ್ಯ ಕ್ಷೇತ್ರದಲ್ಲಿ ಬಂದು ಪ್ರಚಾರ ಮಾಡಿದರೆ ಏನು ಆಗುತ್ತಿರಲಿಲ್ಲ. ಆದರೇ ಎಸ್ಟಿ ಮೀಸಲು ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದು ನೋವು ಅನ್ನಿಸುತ್ತದೆ. ಎಸ್ಟಿ ಮೀಸಲು ಕ್ಷೇತ್ರದಲ್ಲಿ ಚುನಾವಣೆಗೆ ನಿಂತವರೆಲ್ಲ ನಾಯಕ ಸಮುದಾಯದವರೇ. ಹೀಗಿದ್ದರು ಸಮುದಾಯದ ವಿರುದ್ಧವೇ ಪ್ರಚಾರಕ್ಕೆ ಇಳಿದಿದ್ದು ವಿಪರ್ಯಾಸ. ಇದು ಪ್ರತಿಭಾನ್ವಿತ ನಟನ ಭವಿಷ್ಯಕ್ಕೆ ಕುತ್ತು ತರುತ್ತದೆ. ಅತನಿಗೆ ಅನುಭವ ಕಡಿಮೆ ಇದ್ದು, ಶ್ರೇಷ್ಠ ನಟನಾಗಲು ಅವಕಾಶ ಇದೆ. ಇದನ್ನು ಅರಿತುಕೊಂಡು ಮುಂದುವರೆಯಲಿ ಎಂದು ಕಿವಿಮಾತು ಹೇಳಿದರು.
ಎಸ್ಟಿ ಸಮಾಜದ ಹೆಸರಲ್ಲಿ ನಕಲಿ ಜಾತಿ ಪ್ರಮಾಣಪತ್ರ : ಎಸ್ಟಿ ಸಮುದಾಯದ ಹೆಸರಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ಪಡೆಯಲಾಗುತ್ತಿದೆ. ಅದು ಎಲ್ಲರಿಗೂ ಗೊತ್ತಿದ್ದರೂ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದೇವೆ. ನಕಲಿ ಜಾತಿ ಪತ್ರ ವ್ಯವಸ್ಥೆ ತಪ್ಪಿಸದಿದ್ದರೆ ವಾಲ್ಮೀಕಿ ಸಮುದಾಯಕ್ಕೆ ಅನ್ಯಾಯ ಆಗುತ್ತದೆ. ರಾಜಕಾರಣಿಗಳಿಗೆ ಸುಳ್ಳೇ ಬಂಡವಾಳ, ನಕಲಿ ಜಾತಿ ಪತ್ರ ತಪ್ಪಿಸುವ ಕೆಲಸ ಮಾಡುತ್ತೇವೆ. ಮೀಸಲಾತಿ ಶೇ.50 ರಷ್ಟು ದಾಟಿರೋದರಿಂದ ಎಸ್ಟಿ ಮೀಸಲು 9 ಶೆಡ್ಯೂಲ್ ಗೆ ಸೇರಿಸಲು ಮನವಿ ಮಾಡಿದ್ದೇವೆ. ನಾನು ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿದ್ದು, ನನ್ನ ಕ್ಷೇತ್ರದಲ್ಲಿ ವಾಲ್ಮೀಕಿ ಸಮುದಾಯ 100ಕ್ಕೆ 100 ರಷ್ಟು ಮತ ಹಾಕಿದೆ ಎಂದು ರಾಜಣ್ಣ ಹೇಳಿದರು.
ಟ್ರೈಬಲ್ ಯೂನಿವರ್ಸಿಟಿ ಮಾಡಲು ಚಿಂತನೆ; ಸಚಿವ ಬಿ. ನಾಗೇಂದ್ರ : ಎಸ್ಟಿ ಸಮುದಾಯಕ್ಕೆ ಅನುಕೂಲ ಆಗಲು ಟ್ರೈಬಲ್ ಯೂನಿವರ್ಸಿಟಿ ಮಾಡಲು ಚಿಂತನೆ ನಡೆದಿದೆ. ಟ್ರೈಬಲ್ ಯೂನಿವರ್ಸಿಟಿಗೆ ಹಣ ಇಲ್ಲವೆಂದು ಹಣಕಾಸು ಇಲಾಖೆ ಹೇಳುತ್ತಿದೆ. ಮನಸ್ಸಿದ್ರೆ ಮಾರ್ಗ. ಸಿಎಂ ಸಿದ್ದರಾಮಯ್ಯ ಗಮನಕ್ಕೆ ತಂದು ಟ್ರೈಬಲ್ ಯೂನಿವರ್ಸಿಟಿ ಮಾಡೇ ಮಾಡುತ್ತೇವೆ ಎಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಕ್ರೀಡಾ ಸಚಿವ ಬಿ ನಾಗೇಂದ್ರ ಶಪಥ ಮಾಡಿದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಪ್ರತ್ಯೇಕ ಸಚಿವಾಲಯ ಬೇಡಿಕೆ ಇದೆ. ಪ್ರತ್ಯೇಕ ಸಚಿವಾಲಯ ಮಾಡಿದರೆ ಅಭಿವೃದ್ಧಿ ಕೆಲಸ ಮಾಡಲು ಅನುಕೂಲ ಆಗತ್ತದೆ. ವಾಲ್ಮೀಕಿ ಸಮುದಾಯದ ಬೇಡಿಕೆ ಏನೇನು ಇದ್ಯೋ ಅದನ್ನು ಜಾರಿಗೆ ಪ್ರಮಾಣಿಕ ಪ್ರಯತ್ನ ಮಾಡುತ್ತೇವೆ. ಎಸ್ಟಿ ಸಮುದಾಯದ ಕ್ಲಾಸ್ 1, 2 ಗುತ್ತಿಗೆದಾರರಿಗೆ 20% ಅಡ್ವಾನ್ಸ್ ಕೊಡಲು ಚಿಂತನೆ ಕೂಡ ಇದೆ. ನಮ್ಮ ಸಮುದಾಯದ ಗುತ್ತಿಗೆದಾರರಿಗೆ ಅನುಕೂಲ ಆಗಲು ಈ ಯೋಜನೆ ಜಾರಿಗೆ ತರುತ್ತೇನೆ ಎಂದರು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಮೊಬಲೈಜೇಷನ್ ಅಡ್ವಾನ್ಸ್ ನೀಡಲು ಕೂಡ ಚಿಂತನೆ ಇದೆ. ಈ ಬಗ್ಗೆ ಸಿಎಂ ಜೊತೆ ಮಾತನಾಡಲಾಗಿದೆ. ಈ ಮೂಲಕ ಸಾರ್ವಜನಿಕರು ನನ್ನನ್ನು ನೇರವಾಗಿ ಭೇಟಿ ಆಗಬಹುದು. ಯಾವುದೇ ಮಧ್ಯವರ್ತಿಗಳು ಇಲ್ಲದೆ ನನ್ನನ್ನು ನೇರವಾಗಿ ಭೇಟಿಯಾಗಿ ನಿಮ್ಮ ಕೆಲಸ ಮಾಡಿಸಿಕೊಳ್ಳಬೇಕು ಎಂದು ಅಭಿನಂದನಾ ಸಮಾರಂಭದಲ್ಲಿ ನಾಗೇಂದ್ರ ಜನರಿಗೆ ಮಾಹಿತಿ ರವಾನೆ ಮಾಡಿದರು.
ಇದನ್ನೂ ಓದಿ : ಸಿದ್ದರಾಮಯ್ಯ ಅರ್ಧ ಅವಧಿಗೆ ಸಿಎಂ ಅಂತಾ ಯಾರೂ ಹೇಳಿಲ್ಲ, ಐದು ವರ್ಷ ಅವರೇ ಮುಂದುವರೆಯುತ್ತಾರೆ: ಸಚಿವ ಸತೀಶ್ ಜಾರಕಿಹೊಳಿ