ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಆರ್ಭಟ ಮುಂದುವರೆದಿದೆ. ದಿನೇ ದಿನೆ ಕೊರೊನಾ ಪ್ರಕರಣಗಳು ಉಲ್ಭಣ ಆಗುತ್ತಿರುವ ಬೆನ್ನಲ್ಲೇ ಜಿಲ್ಲಾಡಳಿತ ಈಗಾಗಲೇ ಇಎಸ್ಐ ಆಸ್ಪತ್ರೆಯನ್ನು ಪಡೆದು 80 ಆಕ್ಸಿಜನ್ ಬೆಡ್ಗಳ ವ್ಯವಸ್ಥೆ ಮಾಡಿದೆ.
ಇದೀಗ ಮತ್ತೊಂದು ಕೋವಿಡ್ ಕೇರ್ ಸೆಂಟರ್ನ್ನು ಜಿಲ್ಲಾಡಳಿತ ಆರಂಭಿಸಿದೆ. ದಾವಣಗೆರೆ ನಗರದ ತರಳಬಾಳು ಮಹಿಳಾ ಹಾಸ್ಟೆಲ್ಅನ್ನು ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದೆ. ಒಂದು ರೂಂನಲ್ಲಿ 3 ಬೆಡ್ನಂತೆ ಒಟ್ಟು 90 ಜನರಿಗೆ ಇರಲು ವ್ಯವಸ್ಥೆ ಕಲ್ಪಿಸಲಾಗಿದ್ದು, 30 ರೂಮ್ಗಳಿವೆ. ದಾವಣಗೆರೆಯ ಶಿರಮನಗೊಂಡನಹಳ್ಳಿ ಬಳಿ ಇರುವ ಕೋವಿಡ್ ಕೇರ್ ಸೆಂಟರ್ನ್ನು ಸಂಸದ ಸಿದ್ದೇಶ್ವರ್, ಶಾಸಕ ರವೀಂದ್ರನಾಥ್ ಹಾಗೂ ಜಿಲ್ಲಾಧಿಕಾರಿ ಉದ್ಘಾಟನೆ ಮಾಡಿದರು.
ಇನ್ನು ಜಿಲ್ಲೆಯ ಹೊನ್ನಾಳಿ ತಾಲೂಕಿನ ಘಂಟ್ಯಾಪುರ ತಾಂಡಾದಲ್ಲಿ ಜನತೆಗೆ ಶೀತ, ಕೆಮ್ಮು, ಜ್ವರ ಕಾಣಿಸಿಕೊಂಡ ಬೆನ್ನಲ್ಲೇ ಕೊರೊನಾ ಪರೀಕ್ಷೆ ಮಾಡಲಾಗಿದೆ. ಶಾಸಕ ಎಂ.ಪಿ.ರೇಣುಕಾಚಾರ್ಯ ಗ್ರಾಮಕ್ಕೆ ಭೇಟಿ ನೀಡಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ಸಹ ನೀಡಿದ್ದಾರೆ.
ಗ್ರಾಮದಲ್ಲಿ ಇಲ್ಲಿಯವರೆಗೆ ಒಟ್ಟು 17 ಜನರಿಗೆ ಕೋವಿಡ್ ಪರೀಕ್ಷೆ ಮಾಡಿದ್ದು, ಅವರಲ್ಲಿ 5 ಜನಕ್ಕೆ ಕೋವಿಡ್ ಪಾಸಿಟಿವ್ ಪತ್ತೆಯಾಗಿದೆ. ಕೋವಿಡ್-19 ಎರಡನೇ ಅಲೆಯಿಂದ ಸಾವು-ನೋವುಗಳ ಸಂಖ್ಯೆ ಹೆಚ್ಚಾಗಿದ್ದು, ಯಾರೂ ಸಹ ನಿರ್ಲಕ್ಷ್ಯ ಮಾಡದೆ ಸ್ವಯಂ ಪ್ರೇರಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಲು ಶಾಸಕರು ವಿನಂತಿಸಿದರು. ಕೊರೊನಾ ವಾರಿಯರ್ಗಳಾಗಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿಗೆ ಮಾಸ್ಕ್ ವಿತರಣೆ ಮಾಡಿದರು.