ದಾವಣಗೆರೆ : ಅವರು ವೃದ್ಧ ದಂಪತಿ ತಮ್ಮ ಮೂವರು ಹೆಣ್ಣು ಮಕ್ಕಳಿಗೆ ಮದುವೆ ಮಾಡಿಕೊಟ್ಟು ಮನೆಯಲ್ಲಿ ಇಬ್ಬರೇ ಜೀವನ ನಡೆಸುತ್ತಿದ್ದರು. ಆದರೆ, ರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ವೃದ್ಧ ದಂಪತಿಯ ಕತ್ತು ಸೀಳಿ ಕೊಲೆ ಮಾಡಿದ್ದಾರೆ.
ಬೆಳಗ್ಗೆ ಅಪರಾಧ ನಡೆದ ಸ್ಥಳಕ್ಕಾಗಮಿಸಿದ ಪೊಲೀಸ್ ಶ್ವಾನ ತುಂಗಾ ಮೃತ ವೃದ್ಧ ದಂಪತಿಯ ಮೊಮ್ಮಗನ ಸುತ್ತ ಸುತ್ತು ಹಾಕಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ಆದರೆ. ಇದರಲ್ಲಿ ಆತನ ಕೈವಾಡವಿಲ್ಲ ಎಂಬುದು ತಿಳಿದು ಬಂದಿದೆ.
ದಾವಣಗೆರೆ ತಾಲೂಕಿನ ಎಲೆಬೇತೂರು ಗ್ರಾಮದಲ್ಲಿ ಬೆಳ್ಳಂಬೆಳ್ಳಗೆ ಜೋಡಿ ಕೊಲೆ ನಡೆದಿತ್ತು. ದಿನ ಬೆಳಗ್ಗೆ ವಾಯುವಿಹಾರಕ್ಕೆ ತೆರಳಬೇಕಾಗಿದ್ದ ಗುರುಸಿದ್ದಯ್ಯ(80), ಸರೋಜಮ್ಮ(75) ಶವವಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು.
ಯಾರ ತಂಟೆ ತಕರಾರಿಗೆ ಹೋಗದ ಮೃತ ಗುರುಸಿದ್ದಯ್ಯನವರು ಎಂದಿನಂತೆ ಕಳೆದ ರಾತ್ರಿ ಊಟ ಮಾಡಿ ಮಲಗಿದ್ದಾರೆ. ಮಧ್ಯ ರಾತ್ರಿ ಮನೆಗೆ ನುಗ್ಗಿದ ಕೊಲೆಗಡುಕರು ಅಮಾಯಕ ವೃದ್ಧ ದಂಪತಿ ಕತ್ತು ಸೀಳಿ ಕೊಲೆ ಮಾಡಿರುವುದು ಬೆಳಗ್ಗೆ ಬೆಳಕಿಗೆ ಬಂದಿದೆ.
ಮನೆಯಲ್ಲಿ ಇಬ್ಬರೇ ವೃದ್ಧರು ವಾಸ ಮಾಡುತ್ತಿದ್ದನ್ನು ಗುರಿಯಾಗಿಸಿಕೊಂಡು ಈ ಕೃತ್ಯ ಎಸಗಲಾಗಿದೆ. ಇನ್ನು ಬೆಳಗ್ಗೆ ಪಕ್ಕದ ಮನೆಯವರು ಸರೋಜಮ್ಮ ಅವರನ್ನ ಭೇಟಿ ಮಾಡಲು ಹೋದ ಸಂದರ್ಭದಲ್ಲಿ ಈ ವಿಷಯ ತಿಳಿದಿದೆ. ಸ್ಥಳಕ್ಕೆ ಎಸ್ಪಿ ರಿಷ್ಯಂತ್ ಹಾಗೂ ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸ್ವತಃ ಮೊಮ್ಮಗನ ಸುತ್ತ ಸುತ್ತು ಹಾಕಿದ ಪೊಲೀಸ್ ಶ್ವಾನ ತುಂಗಾ.. ಕೊಲೆ ನಡೆದ ಸ್ಥಳಕ್ಕೆ ಪರಿಶೀಲನೆಗಾಗಿ ಕೊಲೆ ಗಡುಕರನ್ನು ಕಂಡು ಹಿಡಿಯಲು ಪೊಲೀಸ್ ಶ್ವಾನ ತುಂಗಾಳನ್ನು ಕರೆತರಲಾಗಿತ್ತು. ಮೊದಲು ಆಗಮಿಸಿದ ಶ್ವಾನ ತುಂಗಾ ಮೃತರ ಮನೆಯೊಳಗೆ ನಡೆದು ಬಳಿಕ ಹೊರ ಬಂದು ಮೃತ ಗುರುಸಿದ್ದಯ್ಯರ ಹಿರಿಯ ಮಗಳು ಭಾಗ್ಯಮ್ಮಳ ಮಗ ಮನೋಜ್ (ಮನು)ನ ಸುತ್ತ ಸುತ್ತು ಹಾಕಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಆದರೆ, ಇದರಲ್ಲಿ ಆತನ ಕೈವಾಡವಿಲ್ಲ ಎಂಬುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ಅಪರಾಧ ನಡೆದ ಸ್ಥಳದಲ್ಲೇ ಮನೋಜ್ ಅವರನ್ನು ಪೊಲೀಸರು ವಶಕ್ಕೆ ಪಡೆದರು. ಇದಲ್ಲದೆ ಶ್ವಾನ ತುಂಗಾ ಬಸಾಪುರ ಗ್ರಾಮದಲ್ಲಿರುವ ಮನೋಜ್‌ನ ನಿವಾಸದ ಬಳಿ ಓಡಿ ಹೋಗಿ ಮನೆ ಮುಂದೆ ಕುಳಿತಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ.
ಜಾಹೀರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ಅಮಾಯಕ ವೃದ್ಧ ದಂಪತಿಯನ್ನ ಕೊಲೆ ಮಾಡಿದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಈ ದುರಂತ ಘಟನೆಯಿಂದ ಇಡೀ ದಾವಣಗೆರೆ ಬೆಚ್ಚಿ ಬಿದ್ದಂತಾಗಿದೆ. ಅದೇನೆ ಆಗಲಿ ಪೊಲೀಸ್ ಶ್ವಾನ ತುಂಗಾ ಮೃತ ವೃದ್ಧ ದಂಪತಿಯ ಮೊಮ್ಮಗನ ಸುತ್ತ ಸುತ್ತು ಹಾಕಿರುವುದು ಸಾಕಷ್ಟು ಅನುಮಾನ ವ್ಯಕ್ತವಾಗುತ್ತಿದೆ. ಪೊಲೀಸರ ತನಿಖೆ ಬಳಿಕವಷ್ಟೇ ಸತ್ಯಾಸತ್ಯತೆ ಹೊರಬರಬೇಕಾಗಿದೆ.
ಓದಿ: ಉದ್ಯೋಗ ನೀಡುವ ಆಮಿಷವೊಡ್ಡಿ ಮಂಗಳೂರಿನ ವ್ಯಕ್ತಿಗೆ ₹25.49 ಲಕ್ಷ ವಂಚನೆ