ದಾವಣಗೆರೆ: ಅನಧಿಕೃತವಾಗಿ ಪರವಾನಗಿ ಇಲ್ಲದೇ ಮನೆಯಲ್ಲಿ ಎರಡು ಬಂದೂಕುಗಳನ್ನು ಇಟ್ಟುಕೊಂಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು, ಜಿಲ್ಲೆಯ ನ್ಯಾಮತಿ ತಾಲೂಕಿನ ಚಿನ್ನಕಟ್ಟೆ ಗ್ರಾಮದ ವೀರಸ್ವಾಮಿ ಬಂಧಿತ ಆರೋಪಿ ಎಂದು ಹೇಳಿದ್ದಾರೆ. ಈತ ಅನಾಧಿಕೃತವಾಗಿ ಎರಡು ನಾಡಬಂದೂಕುಗಳನ್ನು ಇಟ್ಟುಕೊಂಡಿದ್ದ. ಈ ಕುರಿತು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿಸಲಾಗಿದೆ. ಇನ್ನು ದಾಳಿ ವೇಳೆ ಕೋವಿಗಳಿಗೆ ಬಳಸುತ್ತಿದ್ದ ಗನ್ ಪೌಡರ್, ಬಾಲ್ಸ್ಗಳು, ಮೊಳೆಗಳು ದೊರೆತಿದ್ದು, ಎಲ್ಲಾ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ವಿವರಣೆ ನೀಡಿದ್ದಾರೆ.
ಪ್ರಕರಣ ಸಂಬಂಧ ಬಂಧಿತ ಆರೋಪಿ ವೀರಸ್ವಾಮಿಯ ಮಗ ಕುಮ್ರೇಶ್ ಎಂಬುವನು ತಲೆಮರೆಸಿಕೊಂಡಿದ್ದು, ಆತನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ.