ದಾವಣಗೆರೆ: ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಕ್ಷತ್ರಿಯ ಸಮುದಾಯದ ಮುಖಂಡರು ''ನುಡಿದಂತೆ ನಡೆ'' ಎಂಬ ಅಭಿಯಾನಕ್ಕೆ ಮುಂದಾಗಿದ್ದಾರೆ.
ಮಾಧ್ಯಮಗೋಷ್ಟಿಯಲ್ಲಿ ಕರ್ನಾಟಕ ಕ್ಷತ್ರಿಯ ಒಕ್ಕೂಟದ ರಾಜ್ಯಾಧ್ಯಕ್ಷ ಉದಯ್ ಸಿಂಗ್ ಮಾತನಾಡಿ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಚುನಾವಣಾ ಪೂರ್ವ ಪ್ರಚಾರದಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದು ತಾವು ಮುಖ್ಯಮಂತ್ರಿಯಾದರೆ 24 ಗಂಟೆಯೊಳಗೆ ಕ್ಷತ್ರಿಯ ಸಮುದಾಯವನ್ನು ಪ್ರವರ್ಗ 3ಬಿ ಯಿಂದ 2ಎ ಗೆ ಸೇರಿಸುವುದಾಗಿ ಭರವಸೆ ನೀಡಿದ್ದರು. ಆದ್ರೆ ಸಿಎಂ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂದು ನುಡಿದಂತೆ ನಡೆ ಎಂದು ರಾಜ್ಯಾದ್ಯಂತ ಅಭಿಯಾನ ನಡೆಸುವುದಾಗಿ ತಿಳಿಸಿದರು.
ಬರುವ ಬಜೆಟ್ನಲ್ಲಿ ಸಮುದಾಯವನ್ನು 2ಎ ಗೆ ಸೇರಿಸುವಂತೆ ರಾಜ್ಯಾದ್ಯಂತ ನುಡಿದಂತೆ ನಡೆ ಎಂಬ ಸಾಮಾಜಿಕ ಜಾಲತಾಣ ಅಭಿಯಾನ ಆರಂಭಿಸಿದ್ದೇವೆ. ಈ ಅಭಿಯಾನವನ್ನು ಮಧ್ಯ ಕರ್ನಾಟಕ ಕೇಂದ್ರ ಬಿಂದು ದಾವಣಗೆರೆಯಿಂದಲೇ ಇಂದಿನಿಂದ ಶಿವಾಜಿ ಜಯಂತಿಯವರೆಗೆ ನಡೆಸಲಿದ್ದೇವೆ ಎಂದು ಮಾಹಿತಿ ನೀಡಿದರು.