ದಾವಣಗೆರೆ: ತುಮಕುರು ಬಳಿ ಕಾರಿನಿಂದ ಇಳಿದು ರಸ್ತೆ ದಾಟುವ ವೇಳೆ ಅಪಘಾತ ಸಂಭವಿಸಿ, ವ್ಯಕ್ತಿಯೋರ್ವರು ಮೃತಪಟ್ಟಿದ್ದರು. ಇದಕ್ಕೆ ಪರಿಹಾರ ಕೋರಿ 2014 ರಲ್ಲಿ ದಾವೆ ಹೂಡಲಾಗಿತ್ತು. 2017 ರಲ್ಲಿ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಪರಿಹಾರ ನೀಡುವಂತೆ ಆದೇಶ ನೀಡಿತ್ತು. ಆದ್ರೆ ವಾಯುವ್ಯ ಸಾರಿಗೆ ಸಂಸ್ಥೆ ಸ್ವಲ್ಪ ಪ್ರಮಾಣದ ಹಣ ನೀಡಿ ಕೈ ತೊಳೆದುಕೊಂಡಿತ್ತು. ಈ ವಿಷಯವನ್ನು ಮತ್ತೆ ಕೋರ್ಟ್ನ ಗಮನಕ್ಕೆ ತಂದಾಗ ಬಸ್ಗಳನ್ನು ಸೀಜ್ ಮಾಡುವಂತೆ ಆದೇಶಿಸಲಾಗಿತ್ತು. ಇದೀಗ ದಾವಣಗೆರೆ ಕೇಂದ್ರ ಬಸ್ ನಿಲ್ದಾಣದಲ್ಲಿ ನಾಲ್ಕು ಬಸ್ಗಳನ್ನು ಜಪ್ತಿ ಮಾಡಲಾಯಿತು.
ಏನಿದು ಪ್ರಕರಣ: 2013 ರಲ್ಲಿ ತುಮಕೂರು ಬಳಿ ದಾವಣಗೆರೆಯ ಕಿರವಾಡಿ ಲೇಔಟ್ನ ಸಂಜೀವ್ ಪಾಟೀಲ್ ಎಂಬುವರಿಗೆ, ಹಾವೇರಿ ಡಿಪೋದ ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಡಿಕ್ಕಿ ಹೊಡೆದಿತ್ತು. ಪರಿಣಾಮ ಸಂಜೀವ್ ಪಾಟೀಲ್ ಸಾವಿಗೀಡಾಗಿದ್ರು. ರಸ್ತೆ ದಾಟುವಾಗ ಹಾವೇರಿ ಡಿಪೋಗೆ ಸೇರಿದ ಬಸ್ ಡಿಕ್ಕಿ ಹೊಡೆದ ಪರಿಣಾಮ ಸಂಜೀವ್ ಪಾಟೀಲ್ ಎಂಬುವರು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಸುನೀಗಿದ್ರು. ಸಂಜೀವ್ ಪಾಟೀಲ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಸಾಪ್ಟ್ ವೇರ್ ಇಂಜಿನಿಯರ್ ಆಗಿದ್ದರು.
2017 ರಲ್ಲಿ 2 ಕೋಟಿ 15 ಲಕ್ಷ ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿತ್ತು. 1 ಕೋಟಿ 73 ಲಕ್ಷ ಪರಿಹಾರ ನೀಡಿ ವಾಯುವ್ಯ ಸಾರಿಗೆ ಕೈ ತೊಳೆದುಕೊಂಡಿತ್ತು. ಬಾಕಿ ಹಣ ನೀಡದೆ ಸತಾಯಿಸುತ್ತಿರುವ ಹಿನ್ನೆಲೆ ಕೋರ್ಟ್ನಿಂದ ನೋಟೀಸ್ ನೀಡಿದ್ರೂ, ಹಣ ಮಾತ್ರ ಸಂಜೀವ್ ಪಾಟೀಲ್ ಕುಟುಂಬದ ಕೈ ಸೇರಿರಲಿಲ್ಲ. ಮತ್ತೆ ಕೋರ್ಟ್ ಗಮನಕ್ಕೆ ತಂದ ಬಳಿಕ ಎರಡನೇ ಹೆಚ್ಚುವರಿ ಸಿವಿಲ್ ನ್ಯಾಯಲಯ ಬಾಕಿ ಹಣ ನೀಡದ್ದಕ್ಕೆ ಹಾವೇರಿ ಡಿಪೋಗೆ ಸೇರಿದ 4 ಬಸ್ಗಳನ್ನು ಜಪ್ತಿ ಮಾಡಿದೆ.
ಇದನ್ನೂ ಓದಿ: ಅಗ್ನಿಪಥ್ ಕಿಚ್ಚು.. ಬೆಳಗಾವಿಯಲ್ಲಿ ಪ್ರತಿಭಟನೆಗೆ ಬಂದ ನೂರಾರು ಯುವಕರು ದೇವಸ್ಥಾನದಲ್ಲಿ ಲಾಕ್