ಹರಿಹರ: ಸಮಾಜದಲ್ಲಿ ಮನುಷ್ಯರು ಭಕ್ತಿ ಮತ್ತು ವಿನಯದಿಂದ ಇದ್ದಾಗ ಮಾತ್ರ ಉಜ್ವಲ ಭವಿಷ್ಯ ಕಾಣಬಹುದು, ದುರಹಂಕಾರದಿಂದಲ್ಲ ಎಂದು ಚಿತ್ರದುರ್ಗ ಮುರುಘಾ ಮಠದ ಡಾ. ಶಿವಮೂರ್ತಿ ಮುರಘಾ ಶರಣರು ಕಿವಿಮಾತು ಹೇಳಿದರು.
ತಾಲೂಕಿನ ರಾಜನಹಳ್ಳಿಯ ವಾಲ್ಮೀಕಿ ಪೀಠದ ಆವರಣದಲ್ಲಿ ಹಮ್ಮಿಕೊಂಡಿದ್ದ 2ನೇ ವಾಲ್ಮೀಕಿ ಜಾತ್ರಾ ಮಹೋತ್ಸವದ 2ನೇ ದಿನದ ಕಾರ್ಯಕ್ರಮದಲ್ಲಿ ನಡೆದ ಧರ್ಮ ಸಭೆಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಸರ್ವರನ್ನು ಜೊತೆಯಲ್ಲಿ ಕರೆದುಕೊಂಡು ಹೋದಾಗ ಮಾತ್ರ ಮಠದ ಅಭಿವೃದ್ಧಿ ಸಾಧ್ಯ. ಆ ನಿಟ್ಟಿನಲ್ಲಿ ವಾಲ್ಮೀಕಿ ಮಠ ನಡೆದುಕೊಳ್ಳುತ್ತಿದೆ ಎಂದರು.
ನಮ್ಮ ರಾಜ್ಯದಲ್ಲಿ ಉದಯಿಸಿದ ಬಸವ ಧರ್ಮ, ವಚನ ಧರ್ಮ ಮತ್ತು ಶರಣ ಧರ್ಮವು ಶೋಷಿತರನ್ನು ಮುನ್ನೆಲೆಗೆ ತರುವಂತ ಕ್ರಾಂತಿ ಮಾಡುವ ಮೂಲಕ ಸಮಾಜದಲ್ಲಿ ಸಂಚಲನ ಮೂಡಿಸಿತು. ವರ್ಗ ರಹಿತ ಸಮಾಜ ನಿರ್ಮಾಣ ಮತ್ತು ಕಾವ್ಯ ಕೃಷಿಯನ್ನು ಮಾಡಿದ ಕೀರ್ತಿ ವಾಲ್ಮೀಕಿ ಮಹರ್ಷಿಗಳಿಗೆ ಸಲ್ಲುತ್ತದೆ. 12ನೇ ಶತಮಾನದಲ್ಲಿ ಸ್ಥಾಪನೆಯಾದ ಬಸವ ಧರ್ಮವು 21ನೇ ಶತಮಾನಕ್ಕೂ ಜೀವಂತವಾಗಿದೆ. ಅದಕ್ಕೆ ಕಾರಣ ಸರ್ವರನ್ನು ಸಮಾನರನ್ನಾಗಿ ಸ್ವೀಕರಿಸುವ ಮೂಲಕ ಜಾತಿ ವ್ಯವಸ್ಥೆಗೆ ತಿಲಾಂಜಲಿ ಇಡುವ ಪ್ರಯತ್ನ ಮಾಡಿದ್ದು. 21 ನೇ ಶತಮಾನದಲ್ಲಿ ಎಲ್ಲಾ ಸಮಾಜದವರೂ ಬೇಧ-ಭಾವವಿಲ್ಲದೆ ಒಂದಾದರೆ ಕಲ್ಯಾಣ ರಾಜ್ಯ ನಿರ್ಮಾಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಅಭಿಪ್ರಾಯಪಟ್ಟರು.