ದಾವಣಗೆರೆ: ಕೆಪಿಸಿಸಿ ಅಧ್ಯಕ್ಷರಾಗಿ ಜುಲೈ 2ರಂದು ಡಿ.ಕೆ.ಶಿವಕುಮಾರ್ ಅಧಿಕಾರ ಸ್ವೀಕರಿಸಲಿದ್ದಾರೆ. ಯಾವುದೇ ಕಾರಣಕ್ಕೂ ಈ ಬಾರಿ ಪದಗ್ರಹಣ ಸಮಾರಂಭ ಮುಂದೂಡುವ ಪ್ರಶ್ನೆ ಇಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಲಕ್ಷ್ಮೀಪುರದಲ್ಲಿ ಮಾಜಿ ಸಚಿವ ಪಿ.ಟಿ.ಪರಮೇಶ್ವರ್ ನಾಯ್ಕ್ ಪುತ್ರಿ ವಿವಾಹದಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದ ಅವರು, ಈಗಾಗಲೇ ಪದಗ್ರಹಣ ಸಮಾರಂಭಕ್ಕೆ 50 ಜನರು ಭಾಗವಹಿಸಲು ಸಿಎಂ ಯಡಿಯೂರಪ್ಪ ಅನುಮತಿ ನೀಡಿದ್ದಾರೆ. ಲಕ್ಷಾಂತರ ಜನರು ಭಾಗವಹಿಸುತ್ತಾರೆ ಎಂಬುದು ಸುಳ್ಳು. ಗ್ರಾಮೀಣ ಮಟ್ಟದಲ್ಲಿಯೂ ಕಾರ್ಯಕ್ರಮ ನಡೆಯುವುದರಿಂದ ಹೆಚ್ಚು ಜನ ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದರು.
ಸಿಎಂ ಯಡಿಯೂರಪ್ಪ ಕನಸಿಟ್ಟುಕೊಂಡು ಮುಖ್ಯಮಂತ್ರಿ ಆದರು. ಆದರೆ ಸರ್ಕಾರದಲ್ಲಿ ದುಡ್ಡೇ ಇಲ್ಲ. ಕೊರೊನಾ ಬಂದ ಬಳಿಕ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ. ಸರ್ಕಾರಿ ನೌಕರರಿಗೆ ಸಂಬಳ ನೀಡಲು ಸರ್ಕಾರದ ಬಳಿ ಹಣ ಇಲ್ಲ. ಕೆಎಸ್ಆರ್ಟಿಸಿ ನೌಕರರು ದುಡಿಯುತ್ತಿದ್ದು, ಅವರಿಗೆ ಸಂಬಳ ನೀಡಬೇಕು. ಸಾರಿಗೆ ಇಲಾಖೆಯ ನಷ್ಟವನ್ನು ಸರ್ಕಾರವೇ ಭರಿಸಬೇಕು ಎಂದು ಒತ್ತಾಯಿಸಿದರು.
ವಿಧಾನ ಪರಿಷತ್ಗೆ ಹೋಗಲು ಕಾಂಗ್ರೆಸ್ನಲ್ಲಿ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ರಾಷ್ಟ್ರೀಯ ಪಕ್ಷ ಎಂದ ಮೇಲೆ ಇದೆಲ್ಲಾ ಸಹಜ. ನಾಯಕರೆಲ್ಲಾ ಕುಳಿತು ಚರ್ಚಿಸಿ ಹೈಕಮಾಂಡ್ಗೆ ಪಟ್ಟಿ ಕಳುಹಿಸಿಕೊಡುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.