ದಾವಣಗೆರೆ : ಈ ಪ್ರೀತಿ ಎಂಬ ಮಾಯೆಗೆ ಸಿಲುಕಿ ವಿದ್ಯಾರ್ಥಿಗಳಿಬ್ಬರು ಮದುವೆ ಕೂಡ ಆಗಿದ್ದಾರೆ, ಮದುವೆಯಾದ ಬೆಣ್ಣೆನಗರಿಯ ಹುಡುಗಿ ಹಾಗೂ ವಿಜಯನಗರ ಜಿಲ್ಲೆಯ ಯುವಕನಿಗೆ ಈಗ ಜೀವ ಭಯ ಇದೆಯಂತೆ. ಇದರಿಂದ ಕಂಗೆಟ್ಟ ಈ ಜೋಡಿ ರಕ್ಷಣೆ ಕೋರಿ ದಾವಣಗೆರೆಯ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮೊರೆ ಹೋಗಿದ್ದಾರೆ. ಇನ್ನು ಸೆಟಲ್ಮೆಂಟ್ ಮಾಡಿಸುತ್ತೇನೆ ಎಂದು ವಿದ್ಯಾನಗರ ಪೊಲೀಸ್ ಠಾಣೆಯ ಕೆಲ ಪೊಲೀಸರು ಹಣ ಪಡೆದಿದ್ದಾರೆ ಎಂದು ಅವರೇ ದೂರಿದ್ದಾರೆ.
ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಪಾವನಾಪುರದ ಯುವಕ ಕಿರಣ್ ಮತ್ತು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಗರದ ಯುವತಿ ಸೌಮ್ಯ ಪಿಎನ್ ಇಬ್ಬರು ದಾವಣಗೆರೆಯ ಯುಬಿಡಿಟಿ ಕಾಲೇಜ್ ನಲ್ಲಿ ಇಂಜಿನಿಯರಿಂಗ್ ಮಾಡುವ ವೇಳೆ ಪ್ರೇಮಾಂಕುರವಾಗಿದೆ. ಈ ವಿಚಾರ ಮನೆಯಲ್ಲಿ ಗೊತ್ತಾಗಿದ್ದು, ಇಬ್ಬರ ಪ್ರೀತಿಗೆ ಮನೆಯಲ್ಲಿ ವಿರೋಧ ವ್ಯಕ್ತವಾಗಿದೆ.
ಆ ಕಾರಣಕ್ಕೆ ಇಬ್ಬರನ್ನು ಬೇರ್ಪಡಿಸೋ ಕೆಲಸ ಮಾಡೋ ಪ್ರಯತ್ನ ಮಾಡಿದ್ದಾರೆ. ಈ ಜೋಡಿ ಮಧ್ಯೆ ಜಾತಿ ಎಂಬುದು ಅಡ್ಡ ಬಂದಿದ್ದು, ಬೇರ್ಪಡಿಸಲು ಸಾಕಷ್ಟು ಪ್ರತ್ನಗಳು ಪೊಲೀಸರಿಂದ ನಡೆದಿತಂತೆ.
ಭದ್ರಾವತಿಯ ಯುವತಿ ಸೌಮ್ಯ ದಾವಣಗೆರೆಯ ಎಸ್ಎಸ್ ಲೇಔಟ್ ನಲ್ಲಿ ತನ್ನ ಅಜ್ಜಿ ಮನೆಯಿಂದ ಕಾಲೇಜ್ ವಿದ್ಯಾಭ್ಯಾಸಕ್ಕೆ ಹೋಗುತ್ತಿದ್ದಳು, ಯುವಕ ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಪಾವನಾಪುರದವನಾಗಿದ್ದು, ಇಬ್ಬರು ಇಂಜಿನಿಯರಿಂಗ್ ಕಾಲೇಜ್ ನಲ್ಲಿ ವಿದ್ಯಾಭ್ಯಾಸ ಮಾಡುವ ವೇಳೆ ಕಾಲೇಜ್ ನಲ್ಲಿ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಮದುವೆಯಾದ ಬೆನ್ನಲ್ಲೇ ಸೌಮ್ಯ ಅವರ ತಂದೆ ದಾವಣಗೆರೆಯ ವಿದ್ಯಾನಗರ ಠಾಣೆಯಲ್ಲಿ ಮಿಸ್ಸಿಗ್ ಕಂಪ್ಲೆಟ್ ದಾಖಲಿಸಿದ್ದರಿಂದ ಪೊಲೀಸರು ಈ ಜೋಡಿಗೆ ಕಿರುಕುಳ ನೀಡುತ್ತಿದ್ದಾರಂತೆ.
ಈ ಜೋಡಿ ಅಂತರ್ಜಾತಿಯ ವಿವಾಹವಾಗಿರುವ ಕಾರಣದಿಂದಾಗಿ ಮನೆಯಲ್ಲಿ ವಿರೋಧವಿದೆ, ಜೀವ ಭಯ ಇದೆ ಎಂದು ದಾವಣಗೆರೆ ಎಸ್ಪಿ ಸಿಬಿ ರಿಷ್ಯಂತ್ ರವರಿಗೆ ಮನವಿ ಸಲ್ಲಿಸಿದ್ದಾರೆ. ಮನವಿ ಪಡೆದ ಎಸ್ಪಿ ರಕ್ಷಣೆ ನೀಡುವುದಾಗಿ ತಿಳಿಸಿ ಸಂಬಂಧ ಪಟ್ಟ ವಿದ್ಯಾ ನಗರ ಠಾಣೆಗೆ ಕಳುಹಿಸಿ ಕೊಟ್ಟಿದ್ದಾರೆ. ಇನ್ನು ಮದುವೆಯಾದ ಜೋಡಿಗೆ ದೂರವಾಣಿ ಕರೆ ಮಾಡಿದ ವಿದ್ಯಾನಗರ ಠಾಣೆಯ ಪೊಲೀಸರಾದ ಆನಂದ್, ಬುಡೇನ್, ಇಬ್ಬರು ನವ ಜೋಡಿಗೆ ನಿಮ್ಮ ಮೇಲೆ ಕಿಡ್ನ್ಯಾಪ್ ಕೇಸ್ ದಾಖಲಾಗಿದೆ ಎಂದು ಹುಡುಗನ ಮನೆಗೆ ತೆರಳಿ ಐವತ್ತು ಸಾವಿರ ಹಣ ಪಡೆದಿದ್ದಾರೆಂದು ಈ ಜೋಡಿ ಆರೋಪಿಸಿದ್ದಾರೆ.