ದಾವಣಗೆರೆ: ಉಕ್ರೇನ್ನಿಂದ ನನ್ನನ್ನು ಭಾರತಕ್ಕೆ ಕಳಿಸಿಕೊಟ್ಟಿದ್ದೇ ಸ್ನೇಹಿತ ನವೀನ್ ಗ್ಯಾನಗೌಡ್ರ. ನನ್ನನ್ನು ಟ್ಯಾಕ್ಸಿ ಹತ್ತಿಸಿ ಬಾಗಿಲು ಮುಚ್ಚಿದ್ದು ಇನ್ನೂ ಕಣ್ಣಲ್ಲೇ ಇದೇ ಸರ್ ಎಂದು ರಾಣೆಬೆನ್ನೂರು ತಾಲೂಕಿನ ಚಳಗೇರಿಯ ಮೃತ ನವೀನ್ ಸ್ನೇಹಿತ ದಾವಣಗೆರೆಯ ವಿನಯ್ ನೆನೆದು ಕಂಬನಿ ಮಿಡಿದರು.
ದಾವಣಗೆರೆಗೆ ಆಗಮಿಸಿದ ಬಳಿಕ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ವಿನಯ್, ನಾನು ಮತ್ತು ನವೀನ್ ಇಬ್ಬರು ಒಂದೇ ಕೋಣೆಯಲ್ಲಿ ಉಳಿದುಕೊಳ್ಳುತ್ತಿದ್ದೆವು. ಪ್ರತಿದಿನ ನವೀನ್, ಅಮಿತ್, ಸುಮನ್, ಶ್ರೀಕಾಂತ್, ಸಂಜಯ್ ಎಲ್ಲ ಸ್ನೇಹಿತರು ಜೊತೆಯಲ್ಲೇ ಇರುತ್ತಿದ್ದೆವು.
ಉಕ್ರೇನ್ನಲ್ಲಿ ದಾಳಿ ಹೆಚ್ಚಾಗುತ್ತಿದ್ದಂತೆ ನಾವು ಅಲ್ಲಿಂದ ಪಲಾಯನ ಮಾಡುವ ಬಗ್ಗೆ ಆಲೋಚಿಸಿದೆವು. ನವೀನ್ ಅಂದು ನಮ್ಮ ಜೊತೆ ಮಾತನಾಡುತ್ತಾ ತಾನು ಮರುದಿನ ಬರುವುದಾಗಿ ಹೇಳಿದ್ದ. ಆದರೆ, ವಿಧಿಯಾಟ ಬೇರೆಯದ್ದೇ ಆಗಿದೆ ಎಂದು ಮೃತ ಸ್ನೇಹಿತನನ್ನು ನೆನಪಿಸಿಕೊಂಡು ವಿನಯ್ ಭಾವುಕರಾದರು.
ಆತನ ಜೀವನ ಶೈಲಿಯೇ ಬೇರೆ ಇತ್ತು. ಅವನು ಡಿಸಿಪ್ಲೇನ್ ವಿದ್ಯಾರ್ಥಿ ಆಗಿದ್ದ. ಕಾಲೇಜು ಅವಧಿ ಮುಗಿದ ಬಳಿಕ ಹಾಸ್ಟೆಲ್ಗೆ ಬರದೆ ಅಲ್ಲೇ ಕುಳಿತು ಗ್ರಂಥಾಲಯದಲ್ಲಿ ಓದುತ್ತಿದ್ದ. ಇಡೀ ಕಾಲೇಜಿಗೆ ಆತ ಟಾಪರ್ ವಿದ್ಯಾರ್ಥಿ ಆಗಿದ್ದನು ಎಂದು ನವೀನ್ ಜೊತೆಗಿನ ಒಡನಾಟದ ಬಗ್ಗೆ ವಿನಯ್ ಹಂಚಿಕೊಂಡರು.