ದಾವಣಗೆರೆ : ನರೇಗಾ ಯೋಜನೆಯಿಂದ ಹಲವು ಜನರು ಜೀವನ ಕಟ್ಟಿಕೊಂಡಿದ್ದಾರೆ. ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕೆಲಸ ಮಾಡುವ ಮಹಿಳೆಯೊಬ್ಬರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಜಿಲ್ಲೆಯ ಚನ್ನಗಿರಿ ತಾಲೂಕಿನ ದಾಗಿನಕಟ್ಟೆ ಗ್ರಾಮದ ನಿವಾಸಿ ವೀರಮ್ಮ ಪ್ರಶಸ್ತಿ ಪಡೆದ ಮಹಿಳೆ. ಇವರು ನರೇಗಾ ಯೋಜನೆಯಡಿ ಗ್ರಾಮದ ಸಮೀಪದಲ್ಲಿರುವ ಗುಡ್ಡಗಾಡು ಪ್ರದೇಶದಲ್ಲಿ ಮಳೆ ನೀರು ನಿಲ್ಲಲು ಬದು ನಿರ್ಮಾಣ ಮಾಡಿ, ಸುಮಾರು 25 ಸಾವಿರ ಗಿಡಗಳನ್ನು ನೆಟ್ಟಿದ್ದಾರೆ. ಇದನ್ನು ಗುರುತಿಸಿ ಕೇಂದ್ರ ಸರ್ಕಾರ ಮಾರ್ಚ್ 4 ರಂದು ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಿತ್ತು.
ಜಿಲ್ಲೆಯ ದಾಗಿನಕಟ್ಟೆ ಗ್ರಾಮದ ನಿವಾಸಿಯಾಗಿರುವ ವೀರಮ್ಮ ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಗಂಧದ ಮಟ್ಟಿ ಎಂಬ ಗುಡ್ಡಗಾಡು ಪ್ರದೇಶದಲ್ಲಿ ಟ್ರನ್ಚ್ ಕಮ್ ಬಂಡಿ (ಬದು) ನಿರ್ಮಾಣ ಮಾಡಿ ಸಸಿಗಳನ್ನು ನೆಟ್ಟಿದ್ದಾರೆ. ಈ ಗುಡ್ಡಕ್ಕೆ ತೆರಳಲು ಕೂಲಿ ಕಾರ್ಮಿಕರು ಹಿಂದೇಟು ಹಾಕಿದಾಗ ವೀರಮ್ಮನವರು ಇಲ್ಲಿಗೆ ತೆರಳಿ ಗಿಡಗಳನ್ನು ಬೆಳೆಸಿದ್ದಾರೆ.
ಇದಕ್ಕೂ ಮೊದಲು ವೀರಮ್ಮ ಅವರು ಮಣ್ಣಿನ ತೇವಾಂಶ ಹೆಚ್ಚಿಸಲು ಮತ್ತು ಅಂತರ್ಜಲದ ಮಟ್ಟವನ್ನು ಹೆಚ್ಚಿಸಲು ಬದು ನಿರ್ಮಾಣ ಮಾಡಿದ್ದಾರೆ. ಈ ಮೂಲಕ ಗುಡ್ಡದ ಮೇಲೆ ಬಿದ್ದ ಮಳೆ ನೀರು ವ್ಯರ್ಥವಾಗಿ ಹರಿದು ಹೋಗದಂತೆ ತಡೆದಿದ್ದಾರೆ. ಬಳಿಕ ಇಲ್ಲಿ ಗಿಡಗಳನ್ನು ನೆಟ್ಟಿದ್ದಾರೆ. ವೀರಮ್ಮ ಒಬ್ಬರೇ ಕೆಲಸ ಮಾಡುವುದನ್ನು ಕಂಡ ಸಹ ಕೆಲಸಗಾರರು ಬಳಿಕ ವೀರಮ್ಮ ಅವರಿಗೆ ಸಸಿ ನೆಡಲು ಸಹಾಯ ಮಾಡಿದ್ದಾರೆ.
ಹೊಂಗೆ, ಬಿದಿರು, ಹುಣಸೆ, ಸೀತಾಫಲ, ಬೆಟ್ಟದ ನೆಲ್ಲಿಕಾಯಿ, ಕಾಡು ಗೋಡಂಬೆ, ಹಲಸು, ನುಗ್ಗೆ, ಕರಿಬೇವು ಗಿಡ, ಹಣ್ಣಿನ ಗಿಡ ಹೀಗೆ ಹಲವು ಗಿಡಗಳನ್ನು ನೆಟ್ಟು ಪೋಷಿಸಿದ್ದಾರೆ. 2019-20ರಿಂದ ನರೇಗಾ ಯೋಜನೆಯಡಿಯಲ್ಲಿ ಬದು ನಿರ್ಮಾಣ ಮಾಡಿ ಇದುವರೆಗೂ 25 ಸಾವಿರ ಸಸಿಗಳನ್ನು ನೆಟ್ಟಿದ್ದಾರೆ. ಒಟ್ಟು 800 ಜನ ನರೇಗಾ ಯೋಜನೆಯಡಿಯಲ್ಲಿ ಕೆಲಸ ಮಾಡಿದ್ದಾರೆ.
ಜಲಯೋಧ-2023 ಪ್ರಶಸ್ತಿ ಪಡೆದ ವೀರಮ್ಮ: ಇವರ ಸಾಧನೆಯನ್ನು ಗುರುತಿಸಿದ ಕೇಂದ್ರ ಸರ್ಕಾರ ವೀರಮ್ಮ ಅವರಿಗೆ “ಜಲಯೋಧ-2023 (ವಾಟರ್ ವಾರಿಯರ್)' ಪ್ರಶಸ್ತಿ ನೀಡಿದೆ. ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ದೆಹಲಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ವೀರಮ್ಮ,"ಉದ್ಯೋಗ ಖಾತ್ರಿ ಯೋಜನೆ ಅಡಿ ಕಾಯಕ ಬಂಧು ಆಗಿ ಕೆಲಸ ಮಾಡುತ್ತಿದ್ದೇನೆ. ನರೇಗಾದಿಂದ ಸಾಕಷ್ಟು ಅನುಕೂಲ ಆಗಿದೆ. ಕೂಲಿ ಕಾರ್ಮಿಕರಿಗೆ ನೂರು ದಿನ ಕೆಲಸ ಕೊಡಬೇಕು. ಜೊತೆಗೆ ಕೂಲಿ ಹೆಚ್ಚು ಮಾಡಬೇಕು ಎಂದು ಒತ್ತಾಯಿಸಿದರು.ಈ ಗುಡ್ಡದಲ್ಲಿ ಸುಮಾರು 25 ಸಾವಿರ ಸಸಿಗಳನ್ನು ನೆಟ್ಟಿದ್ದೇವೆ. ಆ ಗಿಡಗಳು ಚೆನ್ನಾಗಿ ಬೆಳೆದಿವೆ. ಹೊಂಗೆ, ಬಿದಿರು, ಹುಣಸೆ, ಸೀತಾಫಲ, ಬೆಟ್ಟದ ನೆಲ್ಲಿಕಾಯಿ, ಕಾಡು ಗೋಡಂಬೆ, ಹಲಸು, ನುಗ್ಗೆ ಮುಂತಾದ ಗಿಡಗಳನ್ನು ಹಾಕಿದ್ದೇವೆ. ಆರಂಭದಲ್ಲಿ ನಾನು ಒಬ್ಬಳೇ ಕೆಲಸ ಮಾಡಿದ್ದೇನೆ, ಬಳಿಕ ಹಂತ ಹಂತವಾಗಿ 800 ಜನ ಇಲ್ಲಿ ಕೆಲಸ ಮಾಡಿದ್ದೇವೆ ಎಂದು ತಿಳಿಸಿದರು.
ಮೊದಲು ಕಾಡಿನಲ್ಲಿ ನೀರು ನಿಲ್ಲುವಂತೆ ಬದು (ಟ್ರಂನ್ಚ್ ಕಂ ಬಂಡಿ) ನಿರ್ಮಾಣ ಮಾಡಿದ್ದೇವೆ. ಬಳಿಕ 25 ಸಾವಿರ ಗಿಡಗಳನ್ನು ಹಾಕಿದ್ದೇವೆ, ಗಿಡಗಳನ್ನು ನೆಡಲು ನನಗೆ ಕೂಲಿ ಕಾರ್ಮಿಕರು ಸಹಕರಿಸಿದ್ದಾರೆ. ನನಗೆ ರಾಷ್ಟ್ರ ಪ್ರಶಸ್ತಿ ಸಿಗುತ್ತದೆ ಎಂದು ಅಂದುಕೊಂಡರಲಿಲ್ಲ. ಈ ಅವಾರ್ಡ್ ಸಿಗಲು ಅಧಿಕಾರಿಗಳೇ ಪ್ರಮುಖ ಕಾರಣ. ದೆಹಲಿಯಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಈ ಪ್ರಶಸ್ತಿ ಸಿಕ್ಕಿದ್ದಕ್ಕೆ ತುಂಬಾ ಸಂತೋಷವಾಗಿದೆ ಎಂದು ಹೇಳಿದರು.
ವೀರಮ್ಮ ಅವರ ಸಹೋದರ ಉಮಾ ಮಹೇಶ್ವರಯ್ಯ ಮಾತನಾಡಿ, ಅವರು ಮುನ್ನುಗ್ಗಿ ಕೆಲಸ ಮಾಡಿದ್ದರಿಂದ ಈ ಪ್ರಶಸ್ತಿ ದೊರಕಿದೆ. ಇಲ್ಲಿನ ಗುಡ್ಡದಲ್ಲಿ ಬದು ನಿರ್ಮಾಣ ಮಾಡಿ ಸಸಿಗಳನ್ನು ನೆಟ್ಟಿದ್ದರಿಂದ ಪ್ರಶಸ್ತಿ ದೊರೆತಿದೆ. ಪ್ರಶಸ್ತಿ ಸಿಗುತ್ತದೆ ಎಂದು ಕನಸು ಮನಸಿನಲ್ಲೂ ಅಂದುಕೊಂಡರಲಿಲ್ಲ. ಅರಣ್ಯ ಇಲಾಖೆಯವರಿಂದ ಗಿಡಗಳನ್ನು ತಂದು ನೆಡಲಾಗಿದೆ. ಈ ಪ್ರಶಸ್ತಿ ಲಭಿಸಿರುವುದು ನಮ್ಮ ಗ್ರಾಮ, ತಾಲೂಕು, ಜಿಲ್ಲೆಗೆ ಹೆಮ್ಮೆ ಎಂದು ಹೇಳಿದರು.
ಇದನ್ನೂ ಓದಿ : ಸೇವಂತಿಗೆ ಹೂವಿನ ದರ ಕುಸಿತ: ಬೇಸತ್ತು ಟ್ರ್ಯಾಕ್ಟರ್ನಿಂದ ಬೆಳೆ ನಾಶ ಮಾಡಿದ ಅನ್ನದಾತ