ದಾವಣಗೆರೆ: ಸಿದ್ದರಾಮಯ್ಯ ಹುಟ್ಟುಹಬ್ಬ ಆಚರಿಸಿಕೊಂಡಂತೆ ನಾವು ಸಮಾವೇಶ ಮಾಡುವುದಿಲ್ಲ. ಇದು ವಿಜಯ ಸಂಕಲ್ಪ ಯಾತ್ರೆಯ ಮಹಾಸಂಗಮದ ಸಮಾರೋಪ ಸಮಾರಂಭ. ಇದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗಿಯಾಗಲಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.
ನಗರದಲ್ಲಿ ಮಾತನಾಡಿದ ಅವರು, ಬಿಜೆಪಿ ಮಹಾಸಂಗಮ ಕಾರ್ಯಕ್ರಮಕ್ಕೆ ನಾಲ್ಕು ಜಿಲ್ಲೆಯ ಜನ ಭಾಗಿಯಾಗಲಿದ್ದಾರೆ. ಕಾಂಗ್ರೆಸ್ ಪಟ್ಟಿ ನಾಳೆ ಬಿಡುಗಡೆ ಆಗಲಿದೆ. ಆ ಪಟ್ಟಿ ಬಿಡುಗಡೆಯಾದ ಬಳಿಕ ಒಳ ಜಗಳ ಶುರುವಾಗುತ್ತದೆ ನೋಡಿ ಎಂದ ಅವರು ಹಾಲಿ ಶಾಸಕರಿಗೆ ಟಿಕೆಟ್ ನೀಡುವ ವಿಚಾರವಾಗಿ ಪಾರ್ಲಿಮೆಂಟರಿ ಬೋರ್ಡ್ ನಿರ್ಧಾರ ಮಾಡುತ್ತದೆ ಎಂದರು.
ರಾಜ್ಯಕ್ಕೆ ಮೋದಿ ಪದೇ ಪದೇ ಬರುತ್ತಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದಲ್ಲಿ ಸುತ್ತು ಹಾಕಿದಂತೆ ಯಾವ ಪ್ರಧಾನಿ ಕೂಡ ಸುತ್ತು ಹಾಕಿಲ್ಲ. ಕಾಂಗ್ರೆಸ್ನವರು 70 ವರ್ಷ ಆಳಿದರೂ ಕೂಡ ಏಕೆ ಮೋದಿ ಬಂದಂತೆ ರಾಜ್ಯಕ್ಕೆ ಇವರ ಪ್ರಧಾನಿಗಳು ಬರಲಿಲ್ಲ ಎಂದು ಟಾಂಗ್ ಕೊಟ್ಟರು.
ಇದನ್ನೂ ಓದಿ: ಕಾಂಗ್ರೆಸ್ನವರು ಮುಂದೆ ಶಾಶ್ವತವಾಗಿ ಕಿವಿಯಲ್ಲಿ ಹೂವಿಟ್ಟುಕೊಂಡೇ ತಿರುಗಬೇಕು: ನಳಿನ್ ಕುಮಾರ್ ಕಟೀಲ್
ಯಡಿಯೂರಪ್ಪ ನಮ್ಮ ಪಕ್ಷದ ಸರ್ವೋಚ್ಛ ನಾಯಕ: ಬಿಜೆಪಿಯಲ್ಲಿ ಬಿ ಎಸ್ ವೈ ಅವರನ್ನ ನಿರ್ಲಕ್ಷ್ಯ ಮಾಡುವ ಪ್ರಶ್ನೆಯೇ ಇಲ್ಲ. ಈಗಲೂ ಸಹ ಯಡಿಯೂರಪ್ಪನವರು ನಮ್ಮ ಪಕ್ಷದ ಸರ್ವೋಚ್ಛ ನಾಯಕ. ಅವರ ಮಾರ್ಗದರ್ಶನದಲ್ಲಿಯೇ ಚುನಾವಣೆ ನಡೆಯಲಿದೆ. ಬಿ ಎಸ್ ಯಡಿಯೂರಪ್ಪ ಮೌನವಾಗಿದ್ದಾರೆ ಅಂದ್ರೆ ಅದು ಅವರ ದೌರ್ಬಲ್ಯ ಅಲ್ಲ ಎಂಬ ಬಿ ವೈ ವಿಜಯೇಂದ್ರ ಹೇಳಿಕೆಗೆ ಸ್ಪಷ್ಟನೆ ನೀಡಿದರು.
ಇದನ್ನೂ ಓದಿ: 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆದ್ದು ಬಿಜೆಪಿ ಜಯಭೇರಿ ಬಾರಿಸುತ್ತದೆ : ನಳಿನ್ ಕುಮಾರ್ ಕಟೀಲ್
ಮಂಡ್ಯದಲ್ಲಿ ಜನ ಸೇರುವುದಿಲ್ಲವೆಂಬ ಭಯವಿತ್ತು: ಮಂಡ್ಯದಲ್ಲಿ ನಡೆದ ಸಮಾರಂಭಕ್ಕೆ ಜನ ಸೇರುವುದಿಲ್ಲ ಎಂಬ ಭಯ ಇತ್ತು. ಮಂಡ್ಯ ಜೆಡಿಎಸ್ ಮತ್ತು ಕಾಂಗ್ರೆಸ್ನ ಭದ್ರಕೋಟೆ. ಅದರೆ, ರೋಡ್ ಶೋ ಮಾಡಿ ಅ ಭದ್ರಕೋಟೆಯನ್ನು ನಾವು ಛಿದ್ರ ಮಾಡಿದ್ವಿ. ಅದರಲ್ಲೂ, ದಾವಣಗೆರೆಯಲ್ಲಿ ನಡೆಸಲಿರುವ ಸಮಾವೇಶದಲ್ಲಿ ಹೊಸ ಇತಿಹಾಸ ಸೃಷ್ಟಿ ಮಾಡುತ್ತೇವೆ. ಸಿದ್ದರಾಮಯ್ಯ ಹುಟ್ಟುಹಬ್ಬ ಮಾಡಿಕೊಂಡಾಗ 3 ಲಕ್ಷ ಜನ ಬಂದಿದ್ರೆ 10 ಲಕ್ಷ ಎಂದು ಸುಳ್ಳು ಹೇಳುವುದಿಲ್ಲ. ಅವರಂತೆ ಎಲ್ಲಿಂದಲೂ ಜನರನ್ನ ಕರೆಸುವುದಿಲ್ಲ. ಜನರೇ ಈ ಕಾರ್ಯಕ್ರಮಕ್ಕೆ ಆಗಮಿಸುತ್ತಾರೆ. ಇದು ಕಾರ್ಯಕರ್ತರ ಸಮಾವೇಶ ಅಲ್ಲ, ಇಡೀ ಮತದಾರರ ಸಮಾವೇಶ. ಈ ಕಾರ್ಯಕ್ರಮಕ್ಕೆ ಹತ್ತು ಲಕ್ಷ ಜನರನ್ನ ಸೇರಿಸುವ ಜವಾಬ್ದಾರಿ ಇಲ್ಲಿನ ನಾಯಕರದ್ದು ಮತ್ತು ಕಾರ್ಯಕರ್ತರದ್ದು ಎಂದು ಹೇಳಿದರು.
ಇದನ್ನೂ ಓದಿ: ಜನರ ಸೇವೆ ಮಾಡುವ ಬಿಜೆಪಿಯನ್ನು ವಿಧಾನಸಭಾ ಚುನಾವಣೆಯಲ್ಲಿ ಆರಿಸಿ ತನ್ನಿ: ಕಟೀಲ್ ಮನವಿ