ದಾವಣಗೆರೆ: ತಾಲೂಕಿನ ಮೆಳ್ಳೆಕಟ್ಟೆ ಗ್ರಾಮದಲ್ಲಿ ರಾತ್ರಿ ಮಲಗಿದ್ದ ವೇಳೆ ಮಹಿಳೆಯ ಬರ್ಬರ ಕೊಲೆ ನಡೆದಿದ್ದು, ಕೊಲೆ ನಡೆದಿರುವುದು ಏಕೆ ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ.
ದಾವಣಗೆರೆ ತಾಲೂಕಿನ ಮೆಳ್ಳೆಕಟ್ಟೆ ಗ್ರಾಮದ ಶಂಕ್ರಮ್ಮ (45) ಕೊಲೆಯಾಗಿದ ಮಹಿಳೆ. ಪತಿಯೊಂದಿಗೆ ವಿಚ್ಛೇದನ ಪಡೆದಿದ್ದ ಶಂಕ್ರಮ್ಮ, ತಾನೇ ದುಡಿದು ಜೀವನ ಸಾಗಿಸುತ್ತಿದ್ದಳು. ಶಂಕ್ರಮ್ಮ ಮಲಗಿದ್ದ ವೇಳೆ ದುಷ್ಟರು ನಡುರಾತ್ರಿ ಬಂದು ಆಯುಧದಿಂದ ತಲೆಗೆ ಹೊಡೆದು ಶಂಕ್ರಮ್ಮನನ್ನು ಕೊಲೆ ಮಾಡಿದ್ದರು. ರಕ್ತದ ಮಡುವಿನಲ್ಲಿ ನರಳಿ ರಾತ್ರಿ ವೇಳೆ ಶಂಕ್ರಮ್ಮ ಸಾವನ್ನಪ್ಪಿದ್ದರು. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ತನಿಖೆ ಮಾಡಿದಾಗ ಇದೊಂದು ಭೀಕರ ಕೊಲೆ ಎಂದು ತಿಳಿದು ಬಂದಿತ್ತು.
ಕೊಲೆಗಾರರನ್ನು ಬೆನ್ನತ್ತಿದ್ದ ಪೊಲೀಸರಿಗೆ ಶಂಕ್ರಮ್ಮನ ತಂಗಿಯ ಪತಿ ಹಾಗೂ ಮಗನೇ ಕೊಲೆ ಮಾಡಿದ್ದಾರೆ ಎಂದು ತಿಳಿದಿತ್ತು. ನಂತರ ನವೀನ್ ಮತ್ತು ಅವನ ತಂದೆ ಓಂಕಾರಪ್ಪನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದು, ಕೊಲೆಗೆ ಕಾರಣ ತಿಳಿದು ಬಂದಿದೆ. ಎರಡು ಕುಟುಂಬದ ನಡುವೆ ಕೆಲ ವಿಚಾರಕ್ಕೆ ಹತ್ತಾರು ಸಲ ಜಗಳವಾಗಿತ್ತು. ಆ ಜಗಳಕ್ಕೆ ತಲೆ ಕೊಡದೆ ಶಂಕ್ರಮ್ಮ ಗ್ರಾಮದಲ್ಲಿ ಹಿಟ್ಟಿನ ಗಿರಣಿ ನಡೆಸಿಕೊಂಡು ಬದುಕು ಸಾಗಿಸುತ್ತಿದ್ದಳು. ಜೊತೆಗೆ ವಯಸ್ಸಾದ ತಾಯಿಯನ್ನು ಪಾಲನೆ ಸಹ ಮಾಡುತ್ತಿದ್ದಳು.
ಶಂಕ್ರಮ್ಮನ ತಂದೆ ಕೆಲ ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದಾರೆ. ತಂದೆಗೆ ಗಂಡು ಮಕ್ಕಳಿಲ್ಲ. ಇಬ್ಬರು ಹೆಣ್ಣುಮಕ್ಕಳು. ಹೀಗಾಗಿ ತಂದೆ ಹೆಸರಿಗೆ ಹತ್ತು ಎಕರೆ ಜಮೀನು ಇದ್ದು, ಈ ಹತ್ತು ಎಕರೆ ಜಮೀನಿನನ್ನು ಶಂಕ್ರಮ್ಮ, ಐದು ಎಕರೆ ತಂಗಿಯ ಹೆಸರಿಗೆ, ಒಂದು ಎಕರೆ ತಾಯಿ ಹೆಸರಿಗೆ, ಉಳಿದ ನಾಲ್ಕು ಎಕರೆ ತನ್ನ ಹೆಸರಿಗೆ ಪಾಲು ಮಾಡಿಕೊಟ್ಟಿದ್ದಳು. ಆದರೆ ಶಂಕ್ರಮ್ಮನಿಗೆ ಮಕ್ಕಳಿಲ್ಲದ ಕಾರಣ ತಂಗಿಯ ಪತಿ ಹಾಗೂ ಮಗನಿಗೆ ಇವಳ ನಾಲ್ಕು ಎಕರೆ ಜಮೀನಿನ ಮೇಲೆ ಕಣ್ಣು ಬಿದ್ದಿತ್ತು ಎನ್ನಲಾಗಿದೆ ನಿನಗೆ ಮಕ್ಕಳಿಲ್ಲ. ನಿನ್ನ ಜಮೀನನ್ನು ನಮ್ಮ ಹೆಸರಿಗೆ ಮಾಡಿಕೊಡು ಎಂದು ಜಗಳ ತೆಗೆದಿದ್ದರಂತೆ. ಆದರೆ ಶಂಕ್ರಮ್ಮ ಇದಕ್ಕೆ ಒಪ್ಪಿಲ್ಲದ ಕಾರಣ ಸಿಟ್ಟಿಗೆದ್ದಿದ್ದ ತಂದೆ, ಮಗ ರಾತ್ರಿ ಬಂದು ಶಂಕ್ರಮ್ಮನನ್ನು ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಹೀಗೆ ಕೊಲೆ ಮಾಡಿದ ಕಿಲಾಡಿಗಳು ಇನ್ನೊಂದು ಪ್ಲಾನ್ ಮಾಡಿ ಮತ್ತೊಬ್ಬರ ಮೇಲೆ ಕೊಲೆ ಕೇಸ್ ಹಾಕುವ ಹುನ್ನಾರ ನಡೆಸಿದ್ದರಂತೆ. ಆಸ್ತಿಯಾಗಿ ತಾವೇ ಕೊಲೆ ಮಾಡಿದ್ದ ಈ ಪಾಪಿಗಳು, ಮತ್ತೊಬ್ಬರ ತಲೆಗೆ ಕೊಲೆ ಕೇಸ್ ಕಟ್ಟುವ ಯೋಜನೆ ರೂಪಿಸಿದ್ದರು. ಆದರೆ ಪೊಲೀಸರ ತನಿಖೆಯಿಂದ ಸತ್ಯ ಬಯಲಾಗಿದ್ದು, ನವೀನ್ ಹಾಗೂ ಓಂಕಾರಪ್ಪ ಬಂಧನವಾಗಿ, ತನಿಖೆ ಮುಂದುವರೆದಿದೆ.