ಹರಿಹರ: ನಗರಸಭೆ ಸದಸ್ಯರ ಚುನಾವಣೆ ನಡೆದು ಇಂದಿಗೆ ಸುಮಾರು 16 ತಿಂಗಳು ಕಳೆದಿದ್ದು, ಅಧಿಕಾರವಿಲ್ಲದೆ ಕೇವಲ ನೆಪ ಮಾತ್ರಕ್ಕೆ ಸದಸ್ಯರಾಗಿದ್ದರು. ಅಧಿಕಾರಕ್ಕಾಗಿ ಕಾದು ಕುಳಿತಿದ್ದ ಸದಸ್ಯರಿಗೆ ನ್ಯಾಯಾಂಗ ಹಾಗೂ ಸರ್ಕಾರವು ಹಸಿರು ನಿಶಾನೆ ತೋರಿರುವ ಹಿನ್ನಲೆ ಅ.29ಕ್ಕೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮುಹೂರ್ತ ನಿಗದಿಗೊಳಿಸಲಾಗಿದೆ.
ಅಧ್ಯಕ್ಷ ಸ್ಥಾನದ ಮೀಸಲಾತಿಯಲ್ಲಿ ಬದಲಾವಣೆಯಾದ ಹಿನ್ನೆಲೆ ಕೆಲ ಸದಸ್ಯರು ನ್ಯಾಯಾಲಯದ ಮೆಟ್ಟಿಲೇರಿದ್ದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಲಯವು ತಡೆಯಾಜ್ಞೆ ತೆರವು ಮಾಡಿ ನ-2ರೊಳಗೆ ರಾಜ್ಯದ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಪ್ರಕ್ರಿಯೆಯನ್ನು ಮುಗಿಸುವಂತೆ ನೀಡಿದ ಅದೇಶದಂತೆ ಹರಿಹರ ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಅ.29ಕ್ಕೆ ನಿಗದಿಯಾಗಿದೆ ಎಂದು ಹೇಳಲಾಗಿದೆ.
ಗದ್ದುಗೆಗಾಗಿ ಸರ್ಕಸ್: ಸಂಸದರು ಮತ್ತು ಶಾಸಕರನ್ನು ಸೇರಿಸಿದರೆ ನಗರಸಭೆಯ ಒಟ್ಟು 33 ಸಂಖ್ಯಾಬಲವಾಗಲಿದ್ದು ಜೆಡಿಎಸ್-14, ಕಾಂಗ್ರೆಸ್-10, ಬಿಜೆಪಿ-5, ಪಕ್ಷೇತರ 2ಸ್ಥಾನಗಳಲ್ಲಿ ಜಯಶೀಲರಾಗಿದ್ದಾರೆ. ಮ್ಯಾಜಿಕ್ ಸಂಖ್ಯೆ 17 ಇದ್ದು ಯಾವುದೇ ಪಕ್ಷಕ್ಕೂ ಬಹುಮತ ಬರದೇ ಇರುವ ಕಾರಣ ಮೈತ್ರಿಯಾದರೆ ಮಾತ್ರ ಅಧಿಕಾರ ಸಿಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಹಿಂದಿನ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಾರಿಯಾದ ಮೀಸಲಾತಿ ಅನ್ವಯ ನಗರಸಭೆಯ ಅಧ್ಯಕ್ಷ ಸ್ಥಾನವು ಪರಿಶಿಷ್ಟ ಪಂಗಡಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆಗೆ ಮೀಸಲಾತಿ ನಿಗದಿಯಾಗಿತ್ತು. ಬದಲಾದ ಸರ್ಕಾರದ ಆದೇಶದ ಪ್ರಕಾರ ಅಧ್ಯಕ್ಷ ಸ್ಥಾನ ಸಾಮಾನ್ಯ [ಮಹಿಳೆ] ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ನಿಗದಿಗೊಳಿಸಿ ಆದೇಶ ಮಾಡಿರುವುದರಿಂದ ಗದ್ದುಗೆ ಹಿಡಿಯಲು ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆ ಗರಿಗೆದರಿದೆ.
ಚುನಾವಣೆ ವೇಳಾಪಟ್ಟಿ: ಅ.29 ರ ಬೆಳಿಗ್ಗೆ 10 ಗಂಟೆಯಿಂದ 11 ಗಂಟೆಯ ವರೆಗೆ ನಾಮಪತ್ರ ಸಲ್ಲಿಸುವುದು. ಮಧ್ಯಾಹ್ನ 1 ಗಂಟೆಗೆ ನಾಮಪತ್ರ ಪರಿಶೀಲನೆ. ನಂತರ 10 ನಿಮಿಷಗಳ ಕಾಲಾವಧಿಯ ಒಳಗೆ ನಾಮಪತ್ರ ಹಿಂಪಡೆಯುವ ಕಾಲಾವಕಾಶ. ಅವಶ್ಯವಿದ್ದರೆ ಚುನಾವಣೆ ನಡೆಯುವುದು.