ದಾವಣಗೆರೆ : ಮಹಾನಗರ ಪಾಲಿಕೆಯ ಕಳೆದ ಐದು ವರ್ಷಗಳ ಅವಧಿಯಲ್ಲಿ 44ನೇ ವಾರ್ಡ್‌ನಲ್ಲಿ ಯಾವುದೇ ರೀತಿಯ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಮತದಾರರು ಬಿಜೆಪಿ ಬೆಂಬಲಿಸಿ ಗೆಲ್ಲಿಸಿದರೆ ಮಾದರಿ ವಾರ್ಡ್ ಮಾಡುವ ಗುರಿ ಹೊಂದಿದ್ದೇನೆ ಎಂದು 44ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಹೆಚ್. ಆರ್.ಶಿಲ್ಪಾ ಭರವಸೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐದು ವರ್ಷಕ್ಕೂ ಹೆಚ್ಚು ಕಾಲ ಆಡಳಿತ ಮಾಡಿದ ಕಾಂಗ್ರೆಸ್ ಪಕ್ಷ ವಾರ್ಡ್‌ನಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕೆಲಸಗಳನ್ನು ಮಾಡಿಲ್ಲ. ಮುಖ್ಯವಾಗಿ 44ನೇ ವಾರ್ಡ್ ವ್ಯಾಪ್ತಿಯ ಮುಖ್ಯರಸ್ತೆಗಳು ಹದಗೆಟ್ಟಿದ್ದರೂ ಪಾಲಿಕೆ ರಸ್ತೆ ನಿರ್ಮಾಣಕ್ಕೆ ಮುಂದಾಗಲಿಲ್ಲ. ಎಸ್ಎಸ್ ಲೇಔಟ್ನಲ್ಲಿಯೂ ಸಹ ಯಾವುದೇ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ವಿನಾಯಕ ನಗರ, ಶಾಂತಿನಗರಗಳಲ್ಲಿ ಸ್ವಚ್ಛತೆಗೆ ಒತ್ತು ಕೊಟ್ಟಿಲ್ಲ. ಈ ಕುರಿತು ಪಾಲಿಕೆಯವರ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ರು.
ನಾನು ಬಿಜೆಪಿಯಲ್ಲಿ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ್ದು, ವಾರ್ಡ್‌ನಲ್ಲೂ ಸಹ ಹಲವು ಸಾಮಾಜಿಕ ಕೆಲಸಗಳನ್ನು ಮಾಡ್ತಾ ಬಂದಿದ್ದೇನೆ. ಇನ್ನೂ ನಾನು ಗೆದ್ದರೆ ವಾರ್ಡ್‌ನಲ್ಲಿ ಎಲ್ಲಾ ರೀತಿಯಾದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತೇನೆ. ಸದಾ ಜನರ ಸೇವೆಗೆ ನನ್ನ ಅವಧಿ ಮೀಸಲಿಡುತ್ತೇನೆ ಎಂದು ಅವರು ಭರವಸೆ ನೀಡಿದರು.
ಮಾಜಿ ಮೇಯರ್ ಗುರುನಾಥ್ ಮಾತನಾಡಿ, 44ನೇ ವಾರ್ಡ್ ವ್ಯಾಪ್ತಿಯ ಕುಂದುವಾಡ ರಸ್ತೆ ಹದಗೆಟ್ಟಿದ್ದರೂ ರಸ್ತೆ ಮಾಡಲಿಲ್ಲ. ವಾರ್ಡ್ ವ್ಯಾಪ್ತಿಯಲ್ಲಿ ಪಾಲಿಕೆಯಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗಲಿಲ್ಲ. ಈ ಹಿನ್ನೆಲೆ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ 44ನೇ ವಾರ್ಡ್ ಬಿಜೆಪಿ ಅಭ್ಯರ್ಥಿ ಶಿಲ್ಪಾ ಅವರನ್ನು ಗೆಲ್ಲಿಸಿದರೆ ವಾರ್ಡ್ ಅಭಿವೃದ್ಧಿಯಾಗುತ್ತದೆ. ಹಾಗಾಗಿ ತಮ್ಮ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಅವರು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಹೆಚ್.ಜಿ. ಗಣೇಶಪ್ಪ, ಎಂ.ಹನುಮಂತಪ್ಪ, ಜೆ.ಸಿ. ದೇವರಾಜ್, ಎನ್.ಟಿ. ನಾಗರಾಜ್, ಮರಿದೇವ್, ಸಂದೀಪ್ ವಿನಾಯಕ ನಗರ, ಬಿ.ಎನ್. ರಾಮು, ಮರಿದೇವ್, ಚಂದ್ರು ಕತ್ತಲಗೆರೆ, ಅಣ್ಣಪ್ಪ .ಎಂ. ಸೇರಿದಂತೆ ಮತ್ತಿತರರಿದ್ದರು.