ದಾವಣಗೆರೆ: ಬೆಂಗಳೂರಿನ ಕೆ.ಜಿ. ಹಳ್ಳಿ ಹಾಗೂ ಡಿ. ಜೆ. ಹಳ್ಳಿಯಲ್ಲಿ ನಡೆದ ಗಲಭೆ ಖಂಡಿಸಿರುವ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ, ಕಾಂಗ್ರೆಸ್ ಶಾಸಕರ ಮನೆ ಮೇಲೆ ದಾಳಿ ನಡೆದರೂ ಮೌನ ವಹಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಹೊನ್ನಾಳಿ ಪಟ್ಟಣದಲ್ಲಿ ಮಾತನಾಡಿದ ಅವರು, ಇಂಥ ದೊಂಬಿ, ಗಲಾಟೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಒತ್ತಾಯಿಸಬೇಕು. ವೋಟ್ ಬ್ಯಾಂಕ್ ರಾಜಕಾರಣ ಬಿಡಬೇಕು. ಮೌನ ಮುರಿದು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಬೇಕು. ಸಿದ್ದರಾಮಯ್ಯ ಮುಗ್ದರು ಎಂದಿದ್ದಾರೆ. ಹಾಗಿದ್ದರೆ ಗಲಾಟೆಗೆ ಪ್ರಚೋದನೆ ನೀಡಿದ್ದು ಯಾರು ಎಂದು ಪ್ರಶ್ನಿಸಿದ್ದಾರೆ.
ಎಸ್ಡಿಪಿಐ ಸಂಘಟನೆಯವರು ಹಿಂದೂ ದೇವತೆಗಳು ಮತ್ತು ಪ್ರಧಾನಿ ಬಗ್ಗೆ ಅವಹೇಳನಕಾರಿಯಾಗಿ, ಕೆಟ್ಟದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಾರೆ. ಇಂಥವರ ಬಗ್ಗೆ ಏನು ಹೇಳುತ್ತೀರಿ ಎಂದು ಪ್ರಶ್ನಿಸಿದ ಅವರು, ಮೊಹಮ್ಮದ್ ಪೈಗಂಬರ್ ಬಗ್ಗೆ ನಮಗೂ ಗೌರವವಿದೆ. ದೂರು ಕೊಡುವ ಬದಲು ಕಾನೂನು ಉಲ್ಲಂಘಿಸಿ ಗಲಾಟೆ ಮಾಡಿದರೆ ರಾಜ್ಯ ಸರ್ಕಾರ ಸಹಿಸುವುದಿಲ್ಲ.
ತಕ್ಷಣವೇ ದೇಶದ್ರೋಹಿಗಳನ್ನು ಬಂಧಿಸಬೇಕು. ಅಲ್ಪಸಂಖ್ಯಾತ ಧಾರ್ಮಿಕ ಮುಖಂಡರು ಪುಂಡರನ್ನು ಕರೆದು ಬುದ್ದಿ ಹೇಳಬೇಕು. ಅವರೇ ಹೇಳಿ ಕೇಸ್ ಹಾಕಿಸಬೇಕು ಎಂದು ಒತ್ತಾಯಿಸಿದರು.