ದಾವಣಗೆರೆ: ಅನೈತಿಕ ಚಟುವಟಿಕೆಯಿಂದ ಶಾಸಕ ಜಮೀರ್ ಅಹ್ಮದ್ ಆಸ್ತಿ ಸಂಪಾದನೆ ಮಾಡಿದ್ದಾರೆ. ಶ್ರೀಲಂಕಾ ಸೇರಿದಂತೆ ಹಲವು ಕ್ಯಾಸಿನೋಗಳಿಗೆ ಹೋಗಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಗಂಭೀರ ಆರೋಪ ಮಾಡಿದ್ದಾರೆ.
ಹೊನ್ನಾಳಿ ಪಟ್ಟಣದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಆಸ್ತಿ ಸಂಪಾದನೆ, ಶೈಕ್ಷಣಿಕ, ರಾಜಕೀಯವಾಗಿ ಬೆಳೆದಿದ್ದು ಅನೈತಿಕತೆಯಿಂದಲೇ. ಜಮೀರ್ ಅಹಮದ್ ಒಬ್ಬ ಎರಡು ನಾಲಿಗೆಯ ಗುಜರಿ ವ್ಯಕ್ತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಡಿಯೂರಪ್ಪ ಸಿಎಂ ಆದರೆ ಖಾಕಿ ಬಟ್ಟೆ ಧರಿಸಿ ವಾಚ್ಮನ್ ಆಗ್ತೇನೆ ಎಂದು ಜಮೀರ್ ಹೇಳಿದ್ದರು. ಸಿಎಂ ಆಗಿ ಯಡಿಯೂರಪ್ಪ ಉತ್ತಮ ಕೆಲಸ ಮಾಡ್ತಿದ್ದಾರೆ. ನಾವು ಹಲವು ಬಾರಿ ಸವಾಲು ಹಾಕಿದ್ದೇವೆ. ಬೆಂಗಳೂರಿನಲ್ಲಿ ಗಲಭೆ, ಡ್ರಗ್ಸ್ ವಿಚಾರದಲ್ಲಿ ಹೆಸರು ಕೇಳಿ ಬಂದ ಕಾರಣ ಜಮೀರ್ ಅಹಮದ್ ರಾಜಕೀಯ ಸನ್ಯಾಸತ್ವ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಡ್ರಗ್ಸ್ ವಿಚಾರದಲ್ಲಿ ಯಾರನ್ನೂ ಬಿಡುವುದಿಲ್ಲ. ಎಷ್ಟೇ ಪ್ರಭಾವಿಯಾಗಿದ್ದರೂ ನಾವು ಬಿಡಲ್ಲ. ಈಗಾಗಲೇ ಸರ್ಕಾರ ಡ್ರಗ್ಸ್ ವಿಚಾರದಲ್ಲಿ ಕಠಿಣ ಕ್ರಮ ಕೈಗೊಳ್ಳಲಿದೆ. ಮುಂಬರುವ ದಿನಗಳಲ್ಲಿ ಮತ್ತಷ್ಟು ಬಿಗಿ ಕ್ರಮ ತೆಗೆದುಕೊಳ್ಳಲಿದೆ ಎಂದು ಹೇಳಿದರು.
ಸಿಎಂ ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ ಭೇಟಿ ಮಾಡಿದಾಗ ನಾನು ಅಲ್ಲಿಯೇ ಇದ್ದೆ. ಯಾವುದೇ ರಾಜಕೀಯ ವಿಚಾರ ಮಾತುಕತೆ ನಡೆದಿಲ್ಲ. ಕುಮಾರಸ್ವಾಮಿ ಬಂದಾಗ ಅಲ್ಲಿಯೇ ಇದ್ದೆ. ಯಾವುದೇ ರಾಜಕೀಯದ ಬಗ್ಗೆ ಚರ್ಚೆ ಆಗಿಲ್ಲ. ಅಭಿವೃದ್ಧಿ ವಿಚಾರವಷ್ಟೇ ಭೇಟಿಯ ಉದ್ದೇಶವಾಗಿತ್ತು. ಕೇಂದ್ರ, ರಾಜ್ಯದಲ್ಲಿ ಸ್ವತಂತ್ರವಾಗಿ ಅಧಿಕಾರದಲ್ಲಿದ್ದೇವೆ. ನಮಗೆ ಯಾರ ಬೆಂಬಲವೂ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.