ದಾವಣಗೆರೆ: ನೈತಿಕ ಪೋಲಿಸ್ ಗಿರಿ ಮಾಡಿದ್ದೇ ಅದಲ್ಲಿ ಅತಂಹವರ ವಿರುದ್ಧ ಖಂಡಿತವಾಗಿ ಕ್ರಮ ಜರುಗಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಆದೇಶಿಸಿದ್ದರು. ಇದೀಗ ಹೇಳಿದಂತೆ ಪೊಲೀಸ್ ಇಲಾಖೆ ನೈತಿಕ ಪೊಲೀಸ್ ಗಿರಿಗೆ ಕಡಿವಾಣ ಹಾಕಲು ಮುಂದಾಗಿದೆ.
ದಾವಣಗೆರೆಯಲ್ಲಿ ಕಳೆದ ದಿನದ ಇಬ್ಬರು ಯುವಕ, ಓರ್ವ ಯುವತಿ ಒಟ್ಟಿಗೆ ಸಿನಿಮಾಕ್ಕೆ ಹೋಗಿದ್ದಾರೆ, ಈ ವೇಳೆ, ಇಬ್ಬರು ಯುವಕರು ಫೇಸ್ ಬುಕ್ ಲೈವ್ ಮಾಡುವ ಮೂಲಕ ನೈತಿಕ ಪೊಲೀಸ್ ಗಿರಿ ಮಾಡಿದ್ದರು. ಅಲ್ಲದೇ ಸಿನಿಮಾಕ್ಕೆ ಬಂದಿದ್ದ ಯುವಕರನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದ ಘಟನೆ ಕೆಟಿಜೆ ನಗರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕಳೆದ ದಿನ ಮಧ್ಯಾಹ್ನ ನಡೆದಿತ್ತು. ನೈತಿಕ ಪೊಲೀಸ್ ಗಿರಿ ನಡೆಸಿದ್ದರ ಬಗ್ಗೆ ಯುವತಿ ದೂರಿ ನೀಡಿದ್ದಾರೆ. ಈ ದೂರಿನ ಆಧಾರದಲ್ಲಿ ಕೆಟಿಜೆ ನಗರ ಪೊಲೀಸ್ ಠಾಣೆಯ ಪೊಲೀಸರು ಇಬ್ಬರನ್ನು ಇಂದು ಬಂಧಿಸಿದ್ದಾರೆ. ಬಂಧಿತರನ್ನು ದಾವಣಗೆರೆಯ ನಿವಾಸಿಗಳಾದ ದೊಡ್ಡೇಶ್ ಹಾಗೂ ನಿಂಗರಾಜ್ ಎಂದು ಎಸ್ಪಿ ಅರುಣ್ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಎಸ್ಪಿ ಡಾ.ಅರುಣ್ ಅವರು, "ಕಳೆದ ದಿನ ಮಧ್ಯಾಹ್ನ ನಗರದ ಗೀತಾಂಜಲಿ ಸಿನಿಮಾ ಮಂದಿರದಲ್ಲಿ ನೈತಿಕ ಪೊಲೀಸ್ ಗಿರಿ ನಡೆದಿದ್ದು, ಇದರಲ್ಲಿ ಸಿನಿಮಾ ವೀಕ್ಷಣೆಗೆ ಒಟ್ಟಿಗೆ ಬಂದಿದ್ದ ಯುವತಿ, ಯುವಕರ ಮೇಲೆ ಇಬ್ಬರು ಚಿತ್ರಮಂದಿರದ ಒಳಗೆ ನೈತಿಕ ಪೊಲೀಸ್ ಗಿರಿ ಮಾಡಿದ್ದರು. ಆ ನೈತಿಕ ಪೊಲೀಸ್ ಗಿರಿ ಮಾಡಿದವರ ಮೇಲೆ ಯುವತಿ ದೂರು ನೀಡಿದ್ದರು. ದೂರು ದಾಖಲಾದ ಬೆನ್ನಲ್ಲೇ ಪೊಲೀಸರು ಚುರುಕು ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಲಾಗಿದೆ" ಎಂದು ತಿಳಿಸಿದರು.
"ಬಂಧಿತರಿಬ್ಬರ ವಿರುದ್ಧ ಜಾತಿ ನಿಂದನೆ, ನೈತಿಕ ಪೊಲೀಸ್ ಗಿರಿ ಪ್ರಕರಣಗಳನ್ನು ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದೆ. ನೈತಿಕ ಪೊಲೀಸ್ ಗಿರಿ ಮಾಡಿದವರಿಗೆ ಸಂಬಂಧಿಸಿದಂತೆ ಹಳೇ ಪ್ರಕರಣಗಳಿವೆ ಎಂದು ತನಿಖೆ ಮಾಡಲಾಗುತ್ತಿದ್ದು, ಈ ರೀತಿ ಮಾಡಲು ಹೊರಗಿನಿಂದ ಬೇರೆ ಯಾರಾದರೂ ಕುಮ್ಮಕ್ಕು ನೀಡಿದ್ದರಾ ಎಂಬುದರ ಬಗ್ಗೆಯೂ ತನಿಖೆ ಮಾಡಲಾಗುವುದು, ಇವರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ತನಿಖೆ ಮಾಡುತ್ತಿದ್ದೇವೆ, ಇಬ್ಬರ ವಿರುದ್ಧ ಎಫ್ಐಆರ್ ಹಾಕಿದ್ದೇವೆ" ಎಂದು ಮಾಹಿತಿ ನೀಡಿದ್ದಾರೆ.
ಚಿತ್ರಮಂದಿರದಲ್ಲಿ ಒಟ್ಟಿಗೆ ಬಂದ ಯುವಕರು ಉಪಟಳ ನೀಡುತ್ತಿದ್ದರು ಎಂಬ ಕಾರಣಕ್ಕೆ ನೈತಿಕ ಪೊಲೀಸ್ ಗಿರಿ ಮಾಡಿದ್ದಾಗಿ ಬಂಧಿತರು ಹೇಳುತ್ತಿದ್ದಾರೆ. ಆದರೆ ಯಾವುದೇ ಸಾರ್ವಜನಿಕನೂ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಅಂತಹ ಅಪರಾಧಗಳು ಕಂಡು ಬಂದಲ್ಲಿ 112 ಕ್ಕೆ ಕರೆ ಮಾಡಿದಲ್ಲಿ ಪೊಲೀಸ್ ಇಲಾಖೆ ನೇರವಾಗಿ ಸಹಾಯಕ್ಕೆ ಬರುತ್ತದೆ. ವಿಚಾರಣೆ ಮಾಡದೇ ಜನರೇ ಹಲ್ಲೆ ಮಾಡುವುದು ಸರಿ ಅಲ್ಲ ಎಂದು ಇದೇ ವೇಳೆ ಕಿವಿ ಮಾತನ್ನು ಎಸ್ಪಿ ಹೇಳಿದ್ದಾರೆ.
"ಇಬ್ಬರು ಫೇಸ್ ಬುಕ್ನಲ್ಲಿ ಲೈವ್ ಮಾಡಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಇನ್ನಷ್ಟೇ ತನಿಖೆ ನಡೆಸಬೇಕಿದೆ. ದೂರಿನಲ್ಲಿ ಯುವತಿ ಈ ಬಗ್ಗೆ ಉಲ್ಲೇಖಿಸಿಲ್ಲ, ಪೊಲೀಸರೇ ಈ ಬಗ್ಗೆ ತನಿಖೆ ನಡೆಸಲಿದ್ದಾರೆ. ಯಾವುದೇ ಸಾರ್ವಜನಿಕನ ಬದುಕನ್ನು ಅವರ ಒಪ್ಪಿಗೆ ಇಲ್ಲದೇ ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಹಾಕುವುದು ಅಪರಾಧವಾಗುತ್ತದೆ. ಪ್ರತಿಯೊಬ್ಬರಿಗೂ ಸಂವಿಧಾನಾತ್ಮಕವಾಗಿ ಬದುಕುವ ಹಕ್ಕಿದೆ. ಇದಕ್ಕೆ ಚ್ಯುತಿ ಬರುವಂತೆ ನಡೆದುಕೊಂಡಲ್ಲಿ ಪೊಲೀಸರು ಕ್ರಮಕೈಗೊಳ್ಳುತ್ತಾರೆ. ವಿಡಿಯೋ ಮಾಡಿದ್ದು ನಿಜವಾದಲ್ಲಿ ಐಟಿ ಆ್ಯಕ್ಟ್ ಅನ್ವಯ ಅವರ ಮೇಲೆ ಶಿಕ್ಷೆ ವಿಧಿಸಲಾಗುತ್ತದೆ. ಇನ್ನು ಈ ರೀತಿಯ ಪ್ರಕರಣ ಜಿಲ್ಲೆಯಲ್ಲಿ ಮರುಕಳಿಸದಂತೆ ನೋಡಿಕೊಳ್ಳಲಾಗುತ್ತದೆ" ಎಂದು ಎಸ್ಪಿ ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ದಾವಣಗೆರೆಯಲ್ಲಿ ಮನೆ ಬಾಗಿಲು ಒಡೆದು ಕಳ್ಳತನ.. 6 ಜನ ಆರೋಪಿಗಳ ಬಂಧನ, 25 ಲಕ್ಷ ಮೌಲ್ಯದ ಚಿನ್ನಾಭರಣ ವಶ